ಮಂಗಳೂರು: ಹಿಜಾಬ್ ಪರ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿನಿಯರ ವಿರುದ್ಧ ಶಾಸಕ ವಿಧಾನಸಭೆಯ ವಿಪಕ್ಷ ಉಪನಾಯಕ ಯು ಟಿ ಖಾದರ್ ಅವರು ಕಿಡಿಕಾರಿದ್ದು, ಇವರೆಲ್ಲ ಒಮ್ಮೆ ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ಹೋಗಿ ಬರಲಿ. ಆಗ ನಮ್ಮ ದೇಶದ ಸ್ವಾತಂತ್ರ್ಯ, ಮಹತ್ವದ ಅರಿವಾಗುತ್ತದೆ ಎಂದು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜು ಮತ್ತು ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಿಜಾಬ್ ವಿಚಾರದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಯಾವ ರೀತಿಯ ಸಹಕಾರ ನೀಡಬೇಕೋ ಅದನ್ನು ನಾನು ಮಾಡಿದ್ದೇನೆ. ಇದರಲ್ಲಿ ಕಾನೂನಿನ ಸಮಸ್ಯೆ ಇರುವುದರಿಂದ ಕಾನೂನು ಪ್ರಕಾರವೇ ಪ್ರಶ್ನೆ ಮಾಡಬೇಕಾಗುತ್ತದೆ. ಅದು ಬಿಟ್ಟು ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಅವಕಾಶ ನೀಡಬಾರದು.
ಮಂಗಳೂರು ವಿವಿ ಕಾಲೇಜಿನ ಕ್ಯಾಲೆಂಡರ್ ನಲ್ಲಿ ಸಮವಸ್ತ್ರದ ಜತೆ ಶಿವಸ್ತ್ರಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಶೈಕ್ಷಣಿಕ ವರ್ಷದ ಮಧ್ಯೆ ಸಿಂಡಿಕೇಟ್ ಸಭೆ ನಡೆಸಿ ಹಿಜಾಬ್ ಹಾಕಬಾರದು ಎನ್ನುವ ತೀರ್ಮಾನ ಮಾಡಿದ್ದಾರೆ. ಶೈಕ್ಷಣಿಕ ವರ್ಷದ ನಡುವೆ ಇಂತಹ ನಿರ್ಧಾರ ಮಾಡಿದ್ದು ಸರಿಯಾ ಎನ್ನುವುದಕ್ಕೂ ಉತ್ತರ ಬೇಕಿದೆ.
ನಮ್ಮ ದೇಶದಲ್ಲಿದ್ದು ಎಷ್ಟೆಲ್ಲ ಮಾತನಾಡಲು ಅವಕಾಶ ಇದೆ. ಆದರೆ, ಪಾಕಿಸ್ತಾನ, ಸೌದಿ ಅರೇಬಿಯಾಕ್ಕೆ ಹೋಗಿ ಮಾತನಾಡಲಿ ನೋಡೋಣ. ಹಾಗಾಗಿ ನಮಗೆ ಇಷ್ಟೊಂದು ಸ್ವಾತಂತ್ರ್ಯ ನೀಡಿದ ಈ ದೇಶದ ಕಾನೂನನ್ನು ನಾವು ಗೌರವಿಸಬೇಕು. ಹಿಜಾಬ್ ವಿಚಾರದಲ್ಲಿ ಕಾನೂನಿನ ಸಮಸ್ಯೆಯಿದ್ದರೆ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಅದು ಬಿಟ್ಟು ಕಾನೂನಿನ ಹೊರಗೆ ಸಮಸ್ಯೆಗೆ ಪರಿಹಾರ ಸಿಗಲ್ಲ. ಜಿಲ್ಲೆಯ ಸಾಂವಿಧಾನಿಕ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸೂಕ್ತ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ