ಕರಾವಳಿ ಭಾಗದಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ಗಳು ರಿಂಗಣಿಸಿವೆ. 9 ತಿಂಗಳಿಂದ ಸೈಲಂಟ್ ಆಗಿದ್ದ ಸ್ಯಾಟಲೈಟ್ ಕರೆಗಳು ಕರಾವಳಿ ಸೇರಿದಂತೆ ಮಲೆನಾಡಿನ ಗುಡ್ಡದಲ್ಲಿ ಪುನಃ ಸಂಪರ್ಕ ಪಡೆದುಕೊಂಡಿದ್ದಾಗಿ ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿದೆ. ಮಂಗಳೂರಿನಲ್ಲಿ ಈ ಹಿಂದೆ ಐಸಿಸ್ ಉಗ್ರರೊಂದಿಗೆ ಲಿಂಕ್ ಹೊಂದಿದ್ದ ಶಾಸಕ ಇದಿನಬ್ಬ ಅವರ ಸೊಸೆಯನ್ನು ಬಂಧಿಸಲಾಗಿತ್ತು. ಇದಕ್ಕಿಂತ ಮುಂಚೆ ದಕ್ಷಿಣ ಕನ್ನಡ ಜಿಲ್ಲೆ ದಟ್ಟಾರಣ್ಯದಲ್ಲಿ ಸಿಗ್ನಲ್ ಟ್ರೇಸ್ ಆಗಿದ್ದವು ಆ ಬಳಿಕ ಎನ್‌ಐಎ ತನ್ನ ಕಾರ್ಯಚರಣೆಯನ್ನು ವೇಗಗೊಳಿಸಿತ್ತು.
ಕಳೆದ ಹತ್ತು ದಿನಗಳಲ್ಲಿ ಮಂಗಳೂರು ಸೇರಿದಂತೆ ನಾಲ್ಕು ಕಡೆ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಂಗಳೂರು ಹೊರವಲಯದ ಕೊಣಾಜೆ ಠಾಣೆ ವ್ಯಾಪ್ತಿಯ ನಾಟೆಕಲ್, ಸುರತ್ಕಲ್ ಬಳಿಯ ಕುಳಾಯಿ ಎಂಬಲ್ಲಿ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವುದು ಪತ್ತೆಯಾಗಿದೆ. ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು-ಬಿರೂರು ಅರಣ್ಯ ಪ್ರದೇಶದಲ್ಲಿ, ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ-ಸಿರಸಿಯ ಮಧ್ಯ ಇರುವ ದಟ್ಟಾರಣ್ಯ ಪ್ರದೇಶದಲ್ಲಿ ಇದರ ಲೊಕೇಶನ್ ಟ್ರೇಸ್ ಆಗಿದೆ.
ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಬಳಕೆಗೆ ನಿಷೇಧ ಇದ್ದರೂ ಕರಾವಳಿ ಭಾಗದಲ್ಲಿ ಆಗಿಂದಾಗ್ಗೆ ಈ ಫೋನ್ ಸಂಪರ್ಕ ಆಗುತ್ತಿರುವುದರ ಹಿಂದೆ ಉಗ್ರರ ಜಾಡು ಇರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಅದರಲ್ಲೂ ಕರಾವಳಿ ಹಾಗೂ ಮಲೆನಾಡಿನ ದಟ್ಟಾರಣ್ಯಗಳಲ್ಲಿಯೇ ಈ ರೀತಿಯ ಫೋನ್ ನೆಟ್ವರ್ಕ್ ಪತ್ತೆಯಾಗಿದ್ದು ಅಧಿಕಾರಿಗಳನ್ನೂ ತಲೆಕೆಡಿಸುವಂತೆ ಮಾಡಿತ್ತು. ಈ ಬಾರಿ ಮಂಗಳೂರು ಸಿಟಿ ಪೊಲೀಸ್ ವ್ಯಾಪ್ತಿಯ ಕೋಣಾಜೆ ಮತ್ತು ಕುಳಾಯಿ ಭಾಗದಲ್ಲಿ ಫೋನ್ ನೆಟ್ವರ್ಕ್ ಪತ್ತೆಯಾಗಿದೆ. ಇಲ್ಲಿಂದ ಸ್ಯಾಟಲೈಟ್ ಮೂಲಕ ಅಂತಾರಾಷ್ಟ್ರೀಯ ಕರೆಗಳು ಕನೆಕ್ಟ್ ಆಗಿರುವ ಶಂಕೆಯಿದೆ. ಹಡಗಿನಲ್ಲಿರುವ ಕ್ಯಾಪ್ಟನ್‍ಗಳಿಗೆ ಈ ಫೋನ್ ಬಳಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ದಟ್ಟಾರಣ್ಯ ಪ್ರದೇಶದಲ್ಲಿ ಇಂತಹ ಫೋನ್ ಆಕ್ಟೀವ್ ಆಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕರಾವಳಿ ಭಾಗದಲ್ಲಿ ಉಗ್ರರ ಸ್ಲೀಪರ್ ಸೆಲ್‍ಗಳು ವರ್ಕ್ ಮಾಡುತ್ತಿದೆಯಾ ಎಂಬ ಸಂಶಯವನ್ನು ಮೂಡಿಸಿದೆ
ಮೇ 23ರಿಂದ 29ರ ವರೆಗಿನ ಅವಧಿಯಲ್ಲಿ ನಾಲ್ಕು ಕಡೆ ಫೋನ್ ಸಂಪರ್ಕ ಆಗಿದ್ದು, ಇದನ್ನು ಬಳಸಿದವರು ಯಾರು ಎನ್ನುವ ಬಗ್ಗೆ ಕೇಂದ್ರೀಯ ಗುಪ್ತಚರ ಏಜನ್ಸಿಗಳು ರಾಜ್ಯ ಇಂಟೆಲಿಜೆನ್ಸಿ ತಂಡದೊಂದಿಗೆ ತಡಕಾಡುತ್ತಿವೆ. ಎನ್ಐಎ ದಾಳಿ ಬಳಿಕ ಉಗ್ರ ಚಟುವಟಿಕೆಗಳ ಬಗ್ಗೆ ಆತಂಕಗೊಂಡಿದ್ದ ಕರಾವಳಿಯ ಜನತೆಗೆ ಈಗ ಮತ್ತೆ ಸ್ಯಾಟಲೈಟ್ ಫೋನ್ ಕರೆ ಸಕ್ರಿಯವಾಗಿರುವುದರಿಂದ ಮತ್ತೆ ಭೀತಿಗೆ ಒಳಗಾಗಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ