Slider

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜಿಸಿದ ಸರ್ಕಾರ 4-6-2022

 


ಬೆಂಗಳೂರು: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ಈಗ ವಿಸರ್ಜಿಸುವ ಮೂಲಕ ಸರ್ಕಾರ ವಿವಾದಕ್ಕೆ ತೆರೆ ಎಳೆಯಲು ನಿರ್ಧರಿಸಿದೆ.

ಈ ಕುರಿತು ಸಿಎಂ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಕೆಲವು ಪಠ್ಯಪುಸ್ತಕಗಳಲ್ಲಿ ಹಲವು ಆಕ್ಷೇಪಾರ್ಹ ಅಂಶಗಳು ಇದ್ದ ಕಾರಣ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳ ಅಲ್ಪ ಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.



ಶ್ರೀ ಶ್ರೀ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು ಹಾಗೂ ನಾಡಿನ ಇತರೆ ಸ್ವಾಮೀಜಿಗಳು ಪ್ರಸ್ತುತ ಪಠ್ಯ ಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಣೆಗಳನ್ನು ಮಾಡಿರುತ್ತಾರೆ. ಬಸವಣ್ಣನವರ ಇದೇ ವಿಷಯಾಂಶಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಲ್ಲಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಇವರ ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಹಾಗೂ ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯವಾದ ಅಂಶಗಳಿವೆ. ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶವನ್ನು ಯಾರ ಭಾವನೆಗೂ ಧಕ್ಕೆ ಆಗದಂತೆ ಪರಿಷ್ಕರಿಸಲಾಗುವುದು ಎಂದು ಹೇಳಿದ್ದಾರೆ.



ಆದಿಚುಂಚನಗಿರಿ ಪೀಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಹಾಗೂ ಇತರರ ಆಶಯದಂತೆ ರಾಷ್ಟ್ರಕವಿ ಕುವೆಂಪುರವರು ವಿರಚಿತ ನಾಡಗೀತೆಯನ್ನು ವಿಕೃತಗೊಳಿಸುವ ರೀತಿಯಲ್ಲಿ ನಾಡಗೀತೆಯ ದಾಟಿಯಲ್ಲಿ ಮೂಲ ಕವನವನ್ನು ಬರೆದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸೈಬರ್‌ ಕ್ರೈಮ್‌ ಬೆಂಗಳೂರು ಇವರಿಗೆ ತನಿಖೆಯನ್ನು ನಡೆಸಲು ಸೂಚಿಸಲಾಗಿದೆ ಎಂದಿದ್ದಾರೆ.


ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ಬಂದಿರುವ ಆರೋಪ / ಆಕ್ಷೇಪಣೆಗಳಿಗೆ ಸ್ಪಷ್ಟೀಕರಣಗಳನ್ನು ಒಳಗೊಂಡ ಟಿಪ್ಪಣಿ ಲಗತ್ತಿಸಿದೆ. ಹಲವಾರು ಅಂಶಗಳಿಗೆ ವಾಸ್ತವ ಅಂಶಗಳಿಂದ ಸ್ಪಷ್ಟೀಕರಣವನ್ನು ಕೊಡಲಾಗಿದೆ. ಪ್ರಸ್ತುತ ಆಕ್ಷೇಪ ಮಾಡಿರುವಂತೆ ಮಹಾನ್‌ ವ್ಯಕ್ತಿಗಳ ಯಾವುದೇ ಪಾಠವನ್ನು ಕೈಬಿಡಲಾಗಿಲ್ಲ.

ಈ ಕೆಳಕಂಡ ನಿರ್ದಾರವನ್ನು ಸರ್ಕಾರವು ತೆಗೆದುಕೊಂಡಿದೆ.




1) ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿರುವುದರಿಂದ ಸದರಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದೆ.

2) ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಯಾವಾದಾದರೂ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸನ್ನು ಸರ್ಕಾರವು ಹೊಂದಿದೆ. ಈ ಹಿನ್ನೆಲೆಯಲ್ಲಿ ಮೇಲೆ ತಿಳಿಸಿದಂತೆ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿ ಪರಿಷ್ಕರಿಸಲು ನಿರ್ಧಾರ ಮಾಡಲಾಗಿದೆ.

3) ರಾಷ್ಟ್ರಕವಿ ಕುವೆಂಪುರವರ ನಾಡಗೀತೆಯನ್ನು ಆಕ್ಷೇಪಾರ್ಹವಾಗಿ ವಿಕೃತಿಗೊಳಿಸಿದ ಅಂಶವು ಪಠ್ಯಪುಸ್ತಕಗಳಲ್ಲಿ ಉಲ್ಲೇಖಗೊಳ್ಳದಿದ್ದರೂ, ಇದರ ಮೂಲಕವನ ಬರೆದ ವ್ಯಕ್ತಿಗಳ ಬಗ್ಗೆ ಕಾನೂನಾತ್ಮಕ ತನಿಖೆಯ ಕ್ರಮವನ್ನು ಸರ್ಕಾರವು ತೆಗೆದುಕೊಂಡಿದೆ.

4) ಪ್ರೊ.ಬರಗೂರು ರಾಮಚಂದ್ರಪ್ಪರವರ ಅಧ್ಯಕ್ಷತೆಯ ಸಮಿತಿಯು ರಚಿಸಿದ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ರಾಷ್ಟ್ರಕವಿ ಕುವೆಂಪುರವರ ಕುರಿತಾದ 7 (ಏಳು) ಗದ್ಯ/ಪದ್ಯಗಳಿಗೆ ಸೀಮಿತವಾಗಿದ್ದನ್ನು, ಪ್ರಸ್ತುತ ಪರಿಷ್ಕರಣಾ ಸಮಿತಿ ರಚಿಸಿರುವ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ 10 (ಹತ್ತು) ಕ್ಕೇರಿಸಿದೆ.

5) ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ನಾಡಪ್ರಭು ಕೆಂಪೇಗೌಡರ ಕುರಿತಾದ ಪಾಠವನ್ನು ಹೊಸದಾಗಿ ಸೇರ್ಪಡೆ ಮಾಡಿದೆ.

6) ಈ ಹಿಂದಿನ ಪಠ್ಯಪುಸ್ತಕಗಳಲ್ಲಿ ಪರಿಚಯಿಸಲಾಗಿದ್ದ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಜೊತೆ ಹಿಂದೂ ಧರ್ಮದ ವಿಷಯವನ್ನೂ ಸೇರ್ಪಡೆ ಮಾಡಿ ಪರಿಚಯಿಸಲಾಗಿದೆ.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo