ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯಗೊಂಡಿದೆ. ಶಿಕ್ಷಣ ಇಲಾಖೆ ಪರೀಕ್ಷಾ ಮೌಲ್ಯಮಾಪಕರಿಗೆ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ, ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯ ಮತ್ತು ಉತ್ತರ ಪತ್ರಿಕೆ ಮೌಲ್ಯಮಾಪನ ಕೆಲಸದಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ನೀಡಲಾಗುವ ಸಂಭಾವನೆ ದರವನ್ನು ಶೇಕಡ. 20ಕ್ಕೆ ಹೆಚ್ಚಳ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದರ ಜೊತೆಗೆ ಮೂರು ಷರತ್ತುಗಳನ್ನು ವಿಧಿಸಿದ್ದು, ಅದು ಮುಂದಿನ ಮೂರು ವರ್ಷ ಜಾರಿಯಲ್ಲಿರಲಿದೆ.
ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿರುವ ಮುಖ್ಯ ಅಧಿಕ್ಷಕರಿಗೆ ದಿನವೊಂದಕ್ಕೆ 1,051 ರೂಪಾಯಿಗೆ, ಉಪಮುಖ್ಯ ಅಧಿಕ್ಷಕರಿಗೆ ದಿನವೊಂದಕ್ಕೆ 979 ರೂಪಾಯಿ, ಸಹಾಯಕ ಮೌಲ್ಯಮಾಪಕರಿಗೆ ಮೂರು ಗಂಟೆ ಅವಧಿಯ ಉತ್ತರ ಪತ್ರಿಕೆ ಮೌಲ್ಯ ಮಾಪನಕ್ಕೆ 36 ರೂಪಾಯಿ, ಹಾಗೂ ದಿನಭತ್ಯೆಯನ್ನು 976 ರೂಪಾಯಿಗೆ, ಸ್ಥಳೀಯ ಭತ್ಯೆಯನ್ನು ಬೆಂಗಳೂರಿನಲ್ಲಿ 288 ರೂಪಾಯಿ ಮತ್ತು ಇತರೆ ಪ್ರದೇಶಗಳಲ್ಲಿ 194 ರೂಪಾಯಿಗೆ ಹೆಚ್ಚಿಸಲಾಗಿದೆ.ಮೊದಲು ಮೂರು ಗಂಟೆ ಅವಧಿಯ ಕನ್ನಡ ಆವೃತ್ತಿಯಲ್ಲದ ಪ್ರಶ್ನೆ ಪತ್ರಿಕೆ ತಯಾರಿಸಲು ಪ್ರತಿಯೊಬ್ಬರಿಗೆ 2,082 ರೂ. ನಿಗದಿ ಪಡಿಸಿತ್ತು. ಇದನ್ನು 2,498 ರೂ.ಗೆ ಹೆಚ್ಚಿಸಲಾಗಿದೆ. ಮೂರು ಗಂಟೆ ಅವಧಿಯ ಕನ್ನಡ ಆವೃತ್ತಿಯ ಸಹಿತ ಪ್ರಶ್ನೆ ಪತ್ರಿಕೆ ತಯಾರಿಸಲು 2,900 ರೂ.ಗೆ ಹೆಚ್ಚಿಸಲಾಗಿದೆ. ವಾಹನ ಚಾಲಕರಿಗೆ ನೀಡಲಾಗುತ್ತಿದ್ದ696 ರೂ. ಅನ್ನು 1,253 ರೂ.ಗೆ ಏರಿಕೆ ಮಾಡಲಾಗಿದೆ. ಈ ರೀತಿ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿರುವ ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ಶೇ.20 ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಯುಜಿಸಿ ವೇತನ ಪಡೆಯುವ ಉಪನ್ಯಾಸಕರಿಗೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಮಾತ್ರವನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳನ್ವಯ ನೀಡತಕ್ಕದ್ದು, ಈ ಪರೀಕ್ಷಾ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಬೋಧಕ ಸಿಬ್ಬಂದಿ ಎಸಗುವ ತಪ್ಪುಗಳಿಗೆ ವಿಧಿಸಲಾಗುವ ದಂಡದ ಬಗ್ಗೆ, ಸೂಕ್ತವಾದ ನಿಯಮಾವಳಿಗಳನ್ನು ರೂಪಿಸಿ ಕಾರ್ಯ ರೂಪಕ್ಕೆ ತರಬೇಕು. ಇದಕ್ಕೆ ತಗಲುವ ವೆಚ್ಚವನ್ನು ಯೋಜನೇತರ ಅಡಿಯಲ್ಲಿ ಪ್ರಸ್ತುತ ವರ್ಷದಲ್ಲಿ ಇಲಾಖೆಗೆ ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ಭರಿಸಬೇಕೆಂದು ಆದೇಶದಲ್ಲಿ ತಿಳಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ