ಉಡುಪಿ : ರಾಜ್ಯದಲ್ಲಿ ಶೇಂದಿ ಪುನಾರಂಭಿಸುವ ಅವಶ್ಯಕತೆ ಇದೆಯೇ ಮತ್ತು ಒಂದು ಕಾಲದಲ್ಲಿ ಇದ್ದ ಶೇಂದಿಗೆ ಈಗಲೂ ಅವಲಂಬನೆ ಯಾಗಿರಬೇಕೆ ಎಂಬ ಚರ್ಚೆಗಳು ನಡೆಯುತ್ತಿವೆ. ಅದರ ಬದಲು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ವಾದವೂ ಇದೆ. ಇಷ್ಟಾಗಿಯೂ ಶೇಂದಿ ಕುಲಕಸುಬು ಎಂಬ ವಾದವನ್ನು ಕೂಡ ಸರಕಾರ ಗಮನಿಸಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಶೇಂದಿ ಪುನಾರಂಭ ಮತ್ತು ನಾರಾಯಣಗುರು ನಿಗಮ ಸ್ಥಾಪನೆಯ ಬೇಡಿಕೆ ಮುಂದಿಟ್ಟು ಶ್ರೀ ಪ್ರಣವಾನಂದ ಸ್ವಾಮೀಜಿ ಗುಲ್ಬರ್ಗ ಭಾಗದಲ್ಲಿ ಅಮರಣಾಂತ ಉಪವಾಸ ಮಾಡುವ ಎಚ್ವರಿಕೆ ಹೇಳಿಕೆ ಬಗ್ಗೆ ಅವರು ಉಡುಪಿಯಲ್ಲಿಂದು ಪ್ರತಿಕ್ರಿಯಿಸಿದರು.
ಈಡಿಗ, ಬಿಲ್ಲವ, ನಾಮ್‌ದಾರಿ ಸಮಾಜಕ್ಕೆ ಸಂಬಂಧಿಸಿ ಶೇಂದಿ ಮರು ಆರಂಭಕ್ಕೆ ಸ್ವಾಮೀಜಿ ಆಗ್ರಹ ಮಾಡಿದ್ದಾರೆ. ಸ್ವಾಮೀಜಿಯ ಮನವಿ ನಮ್ಮ ಹಾಗೂ ಸರಕಾರದ ಗಮನಕ್ಕೆ ಬಂದಿದೆ. 30 ವರ್ಷಗಳ ಹಿಂದೆ ವೀರೇಂದ್ರ ಪಾಟೀಲ್ ಸರಕಾರದಲ್ಲಿ ಆಡಳಿತದಲ್ಲಿ ಶೇಂದಿ ನಿಷೇಧ ಆಗಿತ್ತು. ಆದರೆ ಹೋರಾಟ ಮಾಡಿದ ಪರಿಣಾಮ ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ನಿಷೇಧ ಆಗಿರಲಿಲ್ಲ. ಈಗ ಉಳಿದ ಜಿಲ್ಲೆಯಲ್ಲೂ ಶೇಂದಿ ಪುನಾರಂಭಕ್ಕೆ ಸ್ವಾಮೀಜಿ ಮನವಿ ಮಾಡಿದ್ದಾರೆ ಎಂದರು.
ಶೇಂದಿ ಹೊರತು ಪಡಿಸಿ ನೀರಾ ಮಾರಾಟಕ್ಕೆ ಸರಕಾರವೇ ಅನುಮತಿ ನೀಡಿದೆ. ತೋಟಗಾರಿಕೆ ಇಲಾಖೆ ಮೂಲಕ ತೆಂಗಿನ ಮರದಿಂದ ತೆಗೆದ ನೀರಾ ಮಾರಾಟಕ್ಕೆ ಮುಕ್ತ ಅವಕಾಶ ಇದೆ. ಜೊತೆಗೆ ನೀರಾವನ್ನು ಶೇಂದಿಯಾಗಿ ಮಾರ್ಪಡಿಸಿ ಮಾರಾಟ ಮಾಡುವ ಬಗ್ಗೆಯೂ ಚರ್ಚೆಯಲ್ಲಿದೆ ಎಂದು ಅವರು ಹೇಳಿದರು.
ನಾರಾಯಣಗುರು ನಿಗಮ ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳು ಚರ್ಚೆ ಮಾಡುವ ಪ್ರಸ್ತಾಪ ಮಾಡಿದ್ದಾರೆ. ಬಹಳಷ್ಟು ನಿಗಮ ಮಂಡಳಿಯ ಕುರಿತು ಅವರು ಚರ್ಚೆ ಮಾಡಬೇಕೆಂದಿದ್ದಾರೆ. ಹಿಂದುಳಿದ ವರ್ಗಗಳಿಗೆ ಬಜೆಟ್‌ನಲ್ಲಿ ನೀಡಿದ 400 ಕೋಟಿ ಅನುದಾನ ಈಡಿಗ ಬಿಲ್ಲವ ಸಮುದಾಯದಕ್ಕೆ ಸಾಲದ ರೂಪದಲ್ಲಿ ನೀಡುವ ಪ್ರಸ್ತಾಪ ಇದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಈಡಿಗ, ಬಿಲ್ಲವ ಹಾಗೂ ಶೇಂದಿ ಮಾರಾಟ ಮಾಡುತ್ತಿದ್ದ ಸಮುದಾಯದ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದ ರೂಪದಲ್ಲಿ ಸಾಲ ಪ್ರಸ್ತಾಪ ಇದೆ. ಹೀಗೆ ಹತ್ತಾರು ರೂಪದ ಯೋಜನೆ ಈಡಿಗ ಬಿಲ್ಲವ ಸಮುದಾಯಕ್ಕೆ ನಾರಾ ಯಣಗುರು ಹೆಸರಲ್ಲಿ ನೀಡುವ ಪರಂಪರೆ ಇದೆ. ಧರಣಿ, ಉಪವಾಸ ಸತ್ಯಾ ಗ್ರಹಕ್ಕೂ ಮೊದಲು ಭಿನ್ನವಾಗಿ ಆಲೋಚನೆ ಮಾಡಲು ಸರಕಾರಕ್ಕೆ ಅವಕಾಶ ಕೊಡಬೇಕು. ಶ್ರೀ ಪ್ರಣವಾನಂದ ಸ್ವಾಮೀಜಿ ಸೇರಿದಂತೆ ಅನೇಕ ಪ್ರಮುಖರನ್ನು ಮತ್ತು ಇಂಧನ ಸಚಿವ ಸುನಿಲ್ ಕುಮಾರ್ ಸಹಿತ ಮುಖ್ಯಮಂತ್ರಿ ಅವರನ್ನು ಭೇಟಿ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ