ಕಾಪು: ಟೋಲ್ ಗೇಟ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿ ಹೋಗಿದ್ದು, ಸಿಬಂದಿಗಳ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಹಾರಾಷ್ಟ್ರದಿಂದ ಮಂಗಳೂರಿಗೆ ಹೈಡೋಕ್ಲೋರಿಕ್ ಆಮ್ಲವನ್ನು ತುಂಬಿಸಿಕೊಂಡು ಸಾಗುತ್ತಿದ್ದ ಟ್ಯಾಂಕರ್‌ನ ಟಯರ್ ಕಟಪಾಡಿ ಪೆಟ್ರೋಲ್ ಬಂಕ್ ಬಳಿ ಸ್ಫೋಟಗೊಂಡಿತ್ತು.ಟಯರ್ ಸ್ಫೋಟಗೊಂಡ ಟ್ಯಾಂಕರ್‌ನಲ್ಲಿ ಸ್ವಲ್ಪ ಮಟ್ಟಿನ ಬೆಂಕಿ ಕಾಣಿಸಿಕೊಂಡಿತ್ತು.
ಟ್ಯಾಂಕರ್‌ಗೆ ಬೆಂಕಿ ತಗುಲಿ, ಬೆಂಕಿ ಎಲ್ಲೆಡೆ ವ್ಯಾಪಿಸುವ ಭೀತಿ ಉಂಟಾಗಿದ್ದು ಟ್ಯಾಂಕರ್‌ನ ಹಿಂಬದಿಯಲ್ಲಿ ರೌಂಡ್ಸ್‌ನಲ್ಲಿದ್ದ ಟೋಲ್ ಗೇಟ್ ಸಿಬ್ಬಂದಿಯವರು ಅದನ್ನು ಗಮನಿಸಿದ್ದರು. ಕೂಡಲೇ ಸಮಯ ಪ್ರಜ್ಞೆ ಮೆರೆದ ಟೋಲ್ ಗೇಟ್ ರೌಂಡ್ ಸಿಬ್ಬಂದಿಗಳು ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಮುಂದೆ ಆಗಬಹುದಾಗಿದ್ದ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸುರಕ್ಷಾ ಅಧಿಕಾರಿ ಶೈಲೇಶ್ ಶೆಟ್ಟಿ, ಮನೋಹರ್ ಹೆಜಮಾಡಿ ಸಹಿತ ಟೋಲ್ ಗೇಟ್ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಸ್ಥಳೀಯರು ಕೂಡಾ ಇದಕ್ಕೆ ಸಾಥ್ ನೀಡಿದ್ದಾರೆ. ಬೆಂಕಿ ನಂದಿಸುವ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಟೋಲ್‌ಗೇಟ್ ಸಿಬಂದಿಗಳ ಸಮಯ ಪ್ರಜ್ಞೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ