Slider

ಗೋಮಾಂಸವನ್ನು ಹಿಂದೂಗಳು ಕ್ರಿಶ್ಚಿಯನ್ನರು ಕೂಡ ತಿನ್ನುತ್ತಾರೆ : ತಿನ್ನಬೇಕು ಅನ್ನಿಸಿದರೆ ನಾನು ತಿನ್ನುತ್ತೇನೆ ಮಾಜಿ ಸಿ. ಎಂ ಸಿದ್ದರಾಮಯ್ಯ

'ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ, ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಸಗಣಿ, ಗಂಜಲ ಎತ್ತದ, ಹಸು ಸಾಕದ, ಉಳಿಮೆ ಮಾಡದವರು ಗೋ ಹತ್ಯೆ ಬಗ್ಗೆ ಮಾತನಾಡುತ್ತಾರೆ, ಅವರಿಂದ ನಾವು ಪಾಠ ಕಲಿಯಬೇಕೆ ಎಂದು ಪ್ರಶ್ನಿಸಿದರು.
'ಅಲ್ಪ ಸಂಖ್ಯಾತರ ಹಕ್ಕುಗಳು, ಅವರ ಪರವಾಗಿ ಮಾತನಾಡಿದರೆ, ಸಂಘ ಪರಿವಾರದವರು ನೀನು ಮುಸ್ಲಿಂ

ಸಮುದಾಯದಲ್ಲಿ ಹುಟ್ಟಿದ್ದೀಯಾ ಎಂದು ಕೇಳುತ್ತಾರೆ. ನಮ್ಮ ಧರ್ಮದಲ್ಲಿ ನಿಷ್ಠೆಯ ಜತೆಗೆ ಇತರೆ ಧರ್ಮಗಳನ್ನು

ಗೌರವಿಸುವ ಸಹಿಷ್ಣುತೆ ಇರಬೇಕು. ಪರ ಧರ್ಮದ ಬಗ್ಗೆ ದ್ವೇಷ, ಅಸೂಯೆ ಇದ್ದರೆ ನಾವು ಮನುಷ್ಯರಾಗಲು ಅರ್ಹರಲ್ಲ.

ನಾವೆಲ್ಲ ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು' ಎಂದರು.

ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೆ ಎಂಬುದು ಮುಖ್ಯವಲ್ಲ, ನಾವ್ಯಾರೂ ಇಂತಹ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ. ಆದರೆ ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯಬಾರದು, ಈ ದೇಶ ಒಂದು ಧರ್ಮಕ್ಕೆ ಸೇರಿದ್ದಲ್ಲ, ಎಲ್ಲರಿಗೂ ಸಮಾನ ಅವಕಾಶವಿದೆ. ಭಾರತದಲ್ಲಿರುವ ಎಲ್ಲಾ ಧರ್ಮಗಳ ಜನರ ನಡುವೆ ಸಹಬಾಳ್ವೆ ಅಗತ್ಯ. ಇದನ್ನೇ ನಮ್ಮ ಸಂವಿಧಾನವೂ ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.

'ಸಂಘ ಪರಿವಾರದವರು ಧರ್ಮ, ಮನುಷ್ಯರ ನಡುವೆ ಗೋಡೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಮಾಜವನ್ನು ಜಾತಿ, ಧರ್ಮದ ಹೆಸರಲ್ಲಿ ಒಡೆಯುತ್ತಿದ್ದಾರೆ. ಅಂತಹವರ ಕೈಗೆ ಅಧಿಕಾರ ಕೊಟ್ಟರೆ ಸಮಾಜದಲ್ಲಿ ಮತ್ತಷ್ಟು ಒಡಕು ಮೂಡಲಿದೆ. ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಹಿಂದೂನಾ? ನಾವು ಹಿಂದೂಗಳೇ, ಇತರೆ ಧರ್ಮಗಳ ಬಗ್ಗೆಯೂ ಗೌರವ ಇಟ್ಟುಕೊಂಡಿದ್ದೇವೆ' ಎಂದು ಹೇಳಿದರು.
ಮತಾಂಧರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಸಮಯದಲ್ಲಿ ಜೆಡಿಎಸ್‌ನವರು ಅದಕ್ಕೆ ವಿರೋಧ ಮಾಡಲಿಲ್ಲ. ಸಂಘ ಪರಿವಾರದ ಜತೆಗೆ ಸೇರಿಕೊಂಡು ಸರ್ಕಾರ ಮಾಡಿದವರು ಯಾವ ಜಾತ್ಯತೀತರು ಎಂದು ಪ್ರಶ್ನಿಸಿದರು. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಹಲವು ಭಾವನಾತ್ಮಕ ವಿಚಾರಗಳ ಮೂಲಕ ಸಮಾಜವನ್ನು ಒಡೆಯುವ, ಮನುಷ್ಯರ ನಡುವೆ ಗೋಡಕಟ್ಟುವ ಕೆಲಸವನ್ನು ಸಂಘ ಪರಿವಾರದ ಮುಖಂಡರು ಮಾಡುತ್ತಿದ್ದಾರೆ. ಸಂವಿಧಾನದ ಪರವಾಗಿರುವ ನಾವೆಲ್ಲರೂ ದೇಶ ಒಡೆಯುವವರ ಕೈಗೆ ಅಧಿಕಾರ ಸಿಗದಂತೆ ನೋಡಿಕೊಳ್ಳಬೇಕಿದೆ.
ರಾಜ್ಯದಲ್ಲಿ 2008ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 1954 ರಿಂದಲೂ ಜಾರಿಯಲ್ಲಿದ್ದ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಂದು ವರ್ಗವನ್ನು ಟಾರ್ಗೆಟ್ ಮಾಡಿದರು. ಈಗ ಮತಾಂತರ ನಿಷೇಧ ಕಾಯ್ದೆ ಮೂಲಕ ಮತ್ತಷ್ಟು ಕಿರುಕುಳ ನೀಡುತ್ತಿದೆ. ಹುಸಿ ಜಾತ್ಯತೀತತೆ ಪ್ರದರ್ಶಿಸುತ್ತಿರುವ ಜೆಡಿಎಸ್ ಈ ಎರಡು ಮಹತ್ವದ ಕಾಯ್ದೆಗಳ ಚರ್ಚೆಯ ವೇಳೆ ಸಭಾತ್ಯಾಗ ಮಾಡಿ, ಕಾಯ್ದೆ ಪಾಸಾಗುವಂತೆ ಮಾಡಿ, ಈಗ ನಾಟಕವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo