ರೌಡಿಶೀಟರ್ ರಾಹುಲ್‌ತಿಂಗಳಾಯ ಯಾನೆ ಕಕ್ಕೆ ರಾಹುಲ್ ಎಂಬಾತನ ಕೊಲೆ ಮಾಡಿದ ಆರು ಮಂದಿ ಆರೋಪಿಗಳನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮಹೇಂದ್ರ ಶೆಟ್ಟಿ (27), ಅಕ್ಷಯಕುಮಾರ್ (25), ಸುಶಿತ್ (20) ದಿಲ್ಲೆಶ್ ಬಂಗೇರ (21), ಶುಭಂ (26) ಮತ್ತು ವಿಷ್ಣು.ಪಿ (20) ಎಂದು ಗುರುತಿಸಲಾಗಿದೆ.
ಈ ಪ್ರಕರಣದಲ್ಲಿ ಒಟ್ಟು 13 ಜನ ಭಾಗಿಯಾಗಿದ್ದರು.
ಏಪ್ರಿಲ್ 28ರಂದು ಮಂಗಳೂರು ಎಮ್ಮೆಕರ ಮೈದಾನಕ್ಕೆ ಕೋಳಿ ಅಂಕಕ್ಕೆ ಬಂದಿದ್ದ ಹೊಯ್ ಬಜಾರ್ ನಿವಾಸಿ ಕಕ್ಕೆ ರಾಹುಲ್ ತನ್ನ ಸ್ನೇಹಿತನ ಜೊತೆ ವಾಪಾಸ್ ಮನೆಗೆ ಹೋಗಲು ಸ್ಕೂಟರ್ನಲ್ಲಿ ಹೊರಡುವ ಸಮಯದಲ್ಲಿ ಆರೋಪಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯ್ ಕುಮಾರ್, ಸುಶೀತ್ ಹಾಗೂ ದಿಲೇಶ್ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದಾಗ ರಾಹುಲ್ ಕಕ್ಕೆ ಸ್ಕೂಟರ್ನಿಂದ ಇಳಿದು ಓಡಿ ಹೋಗಿದ್ದರು.
ಆರೋಪಿಗಳು ರಾಹುಲ್ನನ್ನು ಬೆನ್ನತ್ತಿದ್ದಾರೆ. ಈ ಸಮಯದಲ್ಲಿ ದೈವಸ್ನಾನವೊಂದರ ಕಂಪೌಂಡ್ ಗೋಡೆ ಹಾರಿಹೋಗಲು ಪ್ರಯತ್ನಿಸಿದ ಸಮಯ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆತನನ್ನು ಹಿಡಿದು ಎಮ್ಮೆಕರ ಮೈದಾನಕ್ಕೆ ಎಳೆದುಕೊಂಡು ಬಂದು ಮಾರಕಾಸ್ತ್ರದಿಂದ ಕೊಚ್ಚಿ, ಚೂರಿಯಿಂದ ಇರಿದು, ಮಾರಣಾಂತಿಕವಾಗಿ ಗಾಯಗೊಳಿಸಿದ್ದರು. ಗಾಯಗೊಂಡ ರಾಹುಲ್ನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಮೃತ ಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಈ ಬಗ್ಗೆ ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆ ಪುಕರಣ ದಾಖಲಾಗಿತ್ತು.
ಈ ಪ್ರಕರಣದ ಕೃತ್ಯದಲ್ಲಿ ನೇರ ಭಾಗಿಯಾದ ಆರೋಪಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯ್ ಕುಮಾರ್, ಸುಶಿತ್, ದಿಲ್ಲೇಶ್ ಬಂಗೇರನನ್ನು ಮೇ 8 ರ ರಾತ್ರಿ ಸುರತ್ಕಲ್ ರೈಲ್ವೆ ಸ್ಟೇಶನ್ ಬಳಿಯಿಂದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿರುತ್ತಾರೆ . ಈ ಪ್ರಕರಣದಲ್ಲಿ ಒಳ ಸಂಚು ನಡೆಸಿ, ಪ್ರಕರಣದ ಕೃತ್ಯಕ್ಕೆ ಸಹಕರಿಸಿದ ಆರೋಪಿಗಳಾದ ಶುಭಂ ಮತ್ತು ವಿಷ್ಣು.ಪಿಯನ್ನು ಮೇ 9ರಂದು ಬೆಳಗಿನ ಜಾವ ಸುಲ್ತಾನ್ ಬತ್ತೇರಿ ಹಾಗೂ ಸೋಮೇಶ್ವರ ಬೀಚ್ ಬಳಿಯಿಂದ ಬಂಧಿಸಿದ್ದಾರೆ. ಬಂಧಿತರಿಂದ 3 ತಲವಾರು , 4 ಕತ್ತಿ , 3 ಚೂರಿ , ಎರಡು ಸ್ಕೂಟರ್ , ರಾಯಲ್ ಎನ್ಫೀಲ್ಡ್ ಬುಲೆಟ್ ಹಾಗೂ 5 ಮೊಬೈಲ್ ಹ್ಯಾಂಡ್ ಸೆಟ್ ವಶಪಡಿಸಿಕೊಳ್ಳಲಾಗಿದೆ . ಬಂಧಿತರ ಪೈಕಿ ಆರೋಪಿ ಸುಶಿತ್ನ ಮೇಲೆ ಒಂದು ಕೊಲೆ ಯತ್ನ ಪ್ರಕರಣ ಹಾಗೂ ಅಕ್ಷಯ್ ಕುಮಾರ್ನ ಮೇಲೆ ಒಂದು ಹಲ್ಲೆ ಪ್ರಕರಣ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .
ಇದರಲ್ಲಿ ಸುಶೀತ್ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದು, ಮಹೇಂದ್ರ ಕುಮಾರ್, ಅಕ್ಷಯ ಕುಮಾರ್ ಗಲ್ಫ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಾರ್ಚ್ನಲ್ಲಿ ಗಲ್ಫ್ನಿಂದ ಭಾರತಕ್ಕೆ ಬಂದಿದ್ದರು.
ರೌಡಿಶೀಟರ್ ಕಕ್ಕೆ ರಾಹುಲ್ ಕೊಲೆಗೆ ಆರು ವರ್ಷದ ಹಗೆತನ ಕಾರಣವಾಗಿದೆ. 2016 ರಲ್ಲಿ ಎಮ್ಮೆಕೆರೆ ಗ್ರೌಂಡ್ನಲ್ಲಿ ಎರಡು ತಂಡಗಳ ನಡುವೆ ಹಗೆತನ ಆರಂಭವಾಗಿತ್ತು. ಆ ಬಳಿಕ ರಾಹುಲ್ 2019 ರಲ್ಲಿ ಮಹೇಂದ್ರ ಕುಮಾರ್ ಮತ್ತು 2020 ರಲ್ಲಿ ಕಾರ್ತಿಕ್ ಮೇಲೆ ದಾಳಿ ನಡೆಸಿದ್ದನು. ಈ ಎರಡು ತಂಡದವರು ಒಟ್ಟಾಗಿ ಸೇರಿ ಕಕ್ಕೆ ರಾಹುಲ್ ಕೊಲೆ ಮಾಡಲು ಸ್ಕೆಚ್ ಹಾಕಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ