ಉಡುಪಿ: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ 'ತೇಲುವ ಸೇತುವೆ' (ಫ್ಲೋಟಿಂಗ್ ಬ್ರಿಡ್ಜ್) ಯನ್ನು ಮಲ್ಪೆ ಬೀಚ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಕಳೆದ ಶುಕ್ರವಾರವಷ್ಟೇ ಉದ್ಘಾಟನೆ ಕೂಡ ಆಗಿತ್ತು. ಆದರೆ ಉದ್ಘಾಟನೆಗೊಂಡ ಮೂರೇ ದಿನಕ್ಕೆ ಫ್ಲೋಟಿಂಗ್ ಬ್ರಿಡ್ಜ್ ಸಮುದ್ರ ಪಾಲಾಗಿದೆ.
ಮೇ 6 ರಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸಮ್ಮುಖದಲ್ಲಿ ಈ ತೇಲುವ ಸೇತುವೆ ಉದ್ಘಾಟನೆಗೊಂಡಿತ್ತು. ಸ್ಥಳೀಯ ಮೂವರು ಉದ್ಯಮಿಗಳು ಸುಮಾರು 80 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದರು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ 'ಅಸನಿ' ಸೈಕ್ಲೋನ್ ಉಂಟಾದ ಹಿನ್ನೆಲೆ ನಿನ್ನೆ ಮಧ್ಯಾಹ್ನದಿಂದಲೇ ಕಡಲು ಪ್ರಕ್ಷುಬ್ದಗೊಂಡಿತ್ತು. ಪರಿಣಾಮ ತೇಲುವ ಸೇತುವೆಗೆ ಹಾನಿಯಾಗಿದೆ. ಹೀಗಾಗಿ ನಿನ್ನೆ ಸಂಜೆ 4 ಗಂಟೆಯಿಂದಲೇ ಪ್ರವಾಸಿಗರ 'ಸಮುದ್ರ ವಿಹಾರ'ವನ್ನು ನಿಲ್ಲಿಸಲಾಗಿತ್ತು.
ಹೊಯ್ದಾಡುವ ಅಲೆಗಳ ಮಧ್ಯೆ ತೇಲುತ್ತಾ, ಪ್ರವಾಸಿಗರಿಗೆ ವಿಶೇಷ ಅನುಭವ ನೀಡುವಲ್ಲಿ ಈ ಬ್ರಿಡ್ಜ್ ಯಶಸ್ವಿಯಾಗಿತ್ತು. 15 ನಿಮಿಷದ ಮೋಜಿಗೆ 100 ರೂ. ಶುಲ್ಕ ಇರಿಸಲಾಗಿತ್ತು. ಈ ಸೇತುವೆಯು ಸುಮಾರು 100 ಮೀ. ಉದ್ದ, 3.50 ಮೀ. ಅಗಲವಿತ್ತು. ಪ್ರವಾಸಿಗರ ರಕ್ಷಣೆಗಾಗಿ 10 ಲೈಫ್ ಗಾರ್ಡ್ ಗಳು, 30 ಲೈಫ್ ಬಾಯ್ ನಿಯೋಜಿಸಲಾಗಿತ್ತು. ಪ್ರತಿದಿನ 4 ರಿಂದ 5 ಸಾವಿರ ಪ್ರವಾಸಿಗರು ಮಲ್ಪೆ ಬೀಚ್ ಗೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 10 ಸಾವಿರವನ್ನು ದಾಟುತ್ತದೆ. ಹೀಗಾಗಿ, ಈ ಸೇತುವೆ ಮೇಲೆ ನಡೆಯೋ ಇಚ್ಛೆಯೂ ಪ್ರವಾಸಿಗರಿಗೆ ಇತ್ತು. ಆದರೆ, ಸದ್ಯ ಸೇತುವೆ ಕಡಲ ಪಾಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ