ಮಂಗಳೂರು : ನಗರದಲ್ಲಿ ತಾಲಿಬಾನ್ ರೀತಿಯ ಸಂಸ್ಕೃತಿ ಹೇರಿಕೆ ಮಾಡಲು ಯತ್ನಿಸಲಾಗಿದೆ. ಮುಸ್ಲಿಂ ಸಂಘಟನೆಯೊಂದರಿಂದ ಮಂಗಳೂರಿನಲ್ಲಿ ಹವಾ ಸೃಷ್ಟಿಸಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲಾಗುತ್ತಿದೆ. ಹಿಜಾಬ್, ಬುರ್ಕಾ ಧರಿಸಿ ಹೊರಬರುವ ಯುವತಿಯರ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್(ಎಂಡಿಎಫ್) ಕಣ್ಣಿಡುತ್ತಿದೆ.
ಸಂಘಟನೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ನಿಗೂಢವಾಗಿ ಕಾರ್ಯಚರಣೆಯನ್ನು ಮಾಡುತ್ತಿದೆ. ಈ ಸಂಘಟನೆಗಳು ನೈತಿಕ ಪೊಲೀಸ್ ಗಿರಿ ನಡೆಸಲು ಮುಂದಾಗಿದ್ದು, ಬುರ್ಕಾ ಧರಿಸಿ ಅಸಭ್ಯವಾಗಿ ವರ್ತಿಸುವ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದೆ.
ಈ ಯುವತಿಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶವನ್ನು ಹರಿಬಿಡಲಾಗಿದೆ. ಹಿಜಾಬ್, ಬುರ್ಕಾ ಧರಿಸಿ ಮನೆಯಿಂದ ಹೊರಬರುವ ಯುವತಿಯರ ಮೇಲೆ ಕಣ್ಣಿಡುವಂತೆ ಪೋಷಕರಿಗೆ ಎಚ್ಚರಿಕೆ ನೀಡಿದೆ. ಬುರ್ಕಾ ಧರಿಸಿ ಯುವಕರೊಂದಿಗೆ ಪಾರ್ಕ್, ಮಾಲ್, ಥಿಯೇಟರ್ ಸುತ್ತುವ ಯುವತಿಯರನ್ನು ಟಾರ್ಗೆಟ್ ಮಾಡುವ ಬೆದರಿಕೆ ಹಾಕಿದೆ. ಸಂಘಟನೆಯ ಜಾಲವನ್ನು ಭೇದಿಸಲು ಮಂಗಳೂರು ಪೊಲೀಸರು ಮುಂದಾಗಿದ್ದಾರೆ.
ಪೋಸ್ಟ್ನಲ್ಲೇನಿದೆ?: ಸಿಟಿ ಸೆಂಟರ್ನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಬುರ್ಕಾ ಹಾಕಿಕೊಂಡು ನಿಮ್ಮ ಅಸಭ್ಯ ವರ್ತನೆಗಳನ್ನು ಕಂಡು ನಮ್ಮ ಕಾರ್ಯಕರ್ತರು ಬುದ್ಧಿ ಮಾತು ಹೇಳಿ ಪೋಷಕರಿಗೂ ತಿಳಿಸಿ ಎಚ್ಚರಿಕೆಯನ್ನು ಕೊಟ್ಟಿದ್ದೇವೆ. ಆದ್ದರಿಂದ ಇನ್ನೂ ಮುಂದೆ ಇಂತಹ ಅಹಿತಕರ ಘಟನೆ ನಮ್ಮ ಕಾರ್ಯಕರ್ತರ ಕಣ್ಣಿಗೆ ಬಿದ್ದರೆ, ಧರ್ಮದೇಟು ಕೊಟ್ಟು ಯಾವುದೇ ಮುಲಾಜಿಲ್ಲದೆ ಕಾರ್ಯ ನಿರ್ವಹಿಸಲಿದ್ದೇವೆ. ಆದ್ದರಿಂದ ಪೋಷಕರೇ ನಿಮ್ಮ ಮಕ್ಕಳ ಚಲನವಲನಗಳನ್ನು ಪರಿಶೀಲನೆ ಮಾಡಿ ಕಾಲೇಜ್‍ಗೆ ಎಷ್ಟು ಗಂಟೆಗೆ ತಲಾಪುತ್ತಾಳೆ, ಕಾಲೇಜಿನಿಂದ ಮನೆಗೆ ಎಷ್ಟು ಗಂಟೆಗೆ ತಲುಪುತ್ತಾಳೆ ಎಂದು ಗಮನಿಸಿ ಎಂದು ಪೋಸ್ಟ್ ಹಾಕಲಾಗಿದೆ.
ಎಂಡಿಎಫ್ ಹಿಂದೂ ಸಂಘಟನೆಗಳಿಗೂ ಬೆದರಿಕೆಯೊಡ್ಡುತ್ತಿದೆ. ಈ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾವಿಡಲು ಪ್ರತ್ಯೇಕ ತಂಡ ರಚನೆ ಮಾಡಿದೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಡಿಸಿಪಿ ಹರಿರಾಂ ಶಂಕರ್ ನೇತತ್ವದಲ್ಲಿ 6 ಪೊಲೀಸ್ ಅಧಿಕಾರಿಗಳ ತಂಡ ರಚಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಜೊತೆಗೆ ಕಳೆದ 3 ವರ್ಷಗಳಿಂದ ನಾನಾ ಪ್ರಕರಣಗಳಲ್ಲಿ ಭಾಗಿಯಾದ ಸಂಘಟನೆ, ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ 1600ಕ್ಕೂ ಹೆಚ್ಚು ವ್ಯಕ್ತಿಗಳ ಖಾತೆಗಳ ಮೇಲೂ ತೀವ್ರ ನಿಗಾ ವಹಿಸಲಾಗಿದೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ