ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಜ್ವರ ಎಂದು ಆಸ್ಪತ್ರೆಗೆ ದಾಖಲಾದ ನವವಿವಾಹಿತೆಯೊಬ್ಬಳು ವೈದ್ಯರು ನೀಡಿದ ಇಂಜೆಕ್ಷನ್ ನಿಂದ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ ಘಟನೆ ನಡೆದಿದೆ.
ಸಾವನ್ನಪ್ಪಿದ ನವ ವಿವಾಹಿತೆ ಸನಾ ಮಾಂಜ್ರೇಕರ್ ಎಂದು ತಿಳಿದು ಬಂದಿದೆ. ಸನಾಗೆ 19 ದಿನಗಳ ಮೊದಲು ವಿವಾಹವಾಗಿತ್ತು. ಕಳೆದ 8 ದಿನಗಳ ಹಿಂದೆ ಈ ಯುವತಿಗೆ ಜ್ವರ ಕಾಣಿಸಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು.
ಇದಾದ ನಂತರ ನಿನ್ನೆ ಮಧ್ಯಾಹ್ನದ ವೇಳೆ ಮತ್ತೆ ಜ್ವರ, ತಲೆನೋವು ಕಾಣಿಸಿಕೊಂಡ ಹಿನ್ನೆಲೆ ಕಾರವಾರ ನಗರದ ಕಾಜುಭಾಗ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸನಾಳನ್ನು ದಾಖಲಿಸಲಾಗಿತ್ತು ಎಂದು ತಿಳಿಯಲಾಗಿದೆ.
ಅಲ್ಲಿ ಸನಾಗೆ ಗ್ಲುಕೋಸ್ ಹಾಕಲಾಗಿದ್ದು ರಾತ್ರಿ ವೇಳೆಗೆ ಕೊಂಚ ಚೇತರಿಸಿಕೊಂಡಿದ್ದಳು. ಇದಾದ ಬಳಿಕ ಊಟ ಮಾಡಲು ಮುಂದಾಗಿದ್ದಾಗ ಆಸ್ಪತ್ರೆಯ ಶುಶ್ರೂಷಕಿ
ಸನಾಳಿಗೆ 4 ಇಂಜೆಕ್ಷನ್ ನೀಡಿದ್ದರು. ಇಂಜೆಕ್ಷನ್ ನೀಡಿದ ಕೆಲವೇ ಹೊತ್ತಿನಲ್ಲಿ ಆಕೆಗೆ ಹೊಟ್ಟೆ ಉರಿ ಕಾಣಿಸಿಕೊಂಡಿದ್ದು ಉಸಿರಾಟದಲ್ಲೂ ಏರುಪೇರಾಗಿತ್ತು.
ಕೂಡಲೇ ಆಕೆಯನ್ನು ಪರಿಶೀಲಿಸಿದ ಆಸ್ಪತ್ರೆ ಸಿಬ್ಬಂದಿ ಐ.ಸಿ.ಯು ವ್ಯವಸ್ಥೆ ಇಲ್ಲದ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ.
ಅಂಬ್ಯುಲೆನ್ಸ್ ಮೂಲಕ ಸನಾಳನ್ನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಆಕೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಈಗ ಸನಾಳ ಮನೆಯವರು ಈಕೆ ಸಾವಿಗೆ ಇಂಜೆಕ್ಷನ್ ಕಾರಣ ಎಂದು ಆರೋಪಿಸಿದ್ದಾರೆ. ಮತ್ತು ಇದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ