ಕನ್ನಡ ಭಾಷೆಯು ಎಷ್ಟೋಂದು ಸುಂದರವಾಗಿದೆ ಎಂಬುದು ಯಕ್ಷಗಾನದಿಂದ ಅರಿಯಬಹುದೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಅಡ್ಯಾರ್ ಗಾರ್ಡನ್'ನ ಡಾ. ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಜರಗಿದ 'ಯಕ್ಷಧ್ರುವ ಪಟ್ಲ ಸಂಭ್ರಮ ೨೦೨೨' ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.
ಸಿನಿಮಾದಲ್ಲಿ ಕಲಾವಿದರ ಪ್ರತಿ ಕೆಲಸಕ್ಕೂ ಬೇರೆ ಬೇರೆ ಪ್ರಸಾದನ ಮಾಡುವವರು ಇರುತ್ತಾರೆ. ಆದರೆ ಯಕ್ಷಗಾನದಲ್ಲಿ ಕಲಾವಿದ ತನ್ನ ಬಣ್ಣದಿಂದ ಹಿಡಿದು ತನ್ನೆಲ್ಲಾ ಕಾರ್ಯವನ್ನು ತಾನೇ ಮಾಡುತ್ತಾನೆ. ಶಾಸ್ತ್ರೀಯ ಸಂಗೀತದ ಗಂಧಗಾಳಿ ಗೊತ್ತಿಲ್ಲದ ವೇದಿಕೆಯಲ್ಲಿ ಪ್ರಸಂಗಕ್ಕೆ ತಕ್ಕಂತೆ ಎರಿಳಿತ ಮಾಡುತ್ತಾನೆ. ಕೇವಲ ಕೆಲವೇ ವಿಸ್ತೀರ್ಣದ ರಂಗಸ್ಥಳದಲ್ಲಿ ದೇವಲೋಕ, ಪಾತಾಳ ಲೋಕವನ್ನು ನಿರ್ಮಾಣ ಮಾಡುತ್ತಾರೆ. ಆಧುನಿಕತೆಯ ವೇಗದಲ್ಲಿ ಇತರ ಕಲೆಗಳು ನಶಿಸಿ ಹೋಗುತ್ತಿದ್ದರೂ ಯಕ್ಷಗಾನ ಮಾತ್ರ ಕರಾವಳಿ ಜನರ ಪ್ರೋತ್ಸಾಹದಿಂದ ನಿತ್ಯ ನಿರಂತರವಾಗಿ ಸಾಗುತ್ತಿದೆ ಎಂದರು.
ನಾನು ಕೂಡ ಪಟ್ಲರ ಅಭಿಮಾನಿ. ಪಟ್ಲರಂತಹ ಕಲಾವಿದರು ಯಕ್ಷಗಾನದಲ್ಲಿ ಹೊಸತನ ತರುವ ಮೂಲಕ ಯುವಜನತೆ ಯಕ್ಷಗಾನದ ಕಡೆ ಆಕರ್ಷಿತರಾಗಲು ಕಾರಣರಾಗಿದ್ದಾರೆ. ಘಟ್ಟದ ಮೇಲಿರುವ ಪಟ್ಲರ ಅಭಿಮಾನಿ ಬಳಗವು ಪಟ್ಲರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಸಿನಿಮಾ ನಟರಿಗೆ ಇರುವ ಸೌಲಭ್ಯ ಯಕ್ಷಗಾನ ಕಲಾವಿದರಿಗಿಲ್ಲ. ಕಲಾವಿದರ ರಕ್ಷಕರಾಗಿ ಪಟ್ಲ ಫೌಂಡೇಶನ್ ಕಾರ್ಯ ನಿರ್ವಹಿಸುತ್ತಿದೆ. ಅಶಕ್ತ ಕಲಾವಿದರಿಗೆ ಸಹಾಯ ಮಾಡುವುದು, ಸಾಧನೆಗೆ ಪುರಸ್ಕರಿಸಿವ ಮೂಲಕ ಯಕ್ಷಗಾನ ರಂಗಕ್ಕೆ ಅನನ್ಯ ಕೊಡುಗೆಯನ್ನು ಪಟ್ಲರು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮಾಯಣ, ಮಹಾಭಾರತದ ಪಾತ್ರ ಮಹತ್ವವು ಯಕ್ಷಗಾನದಿಂದ ತಿಳಿಯುತ್ತದೆ. ದೇಶ ಸಾಂಸ್ಕೃತಿಕವಾಗಿ ಗಟ್ಟಿಯಾಗಲು ಇಂತಹ ಕಲಾವಿದರ ಕೊಡುಗೆ ಮಹತ್ತರವಾದುದು. ಪಟ್ಲ ಫೌಂಡೇಶನಿಗೆ ದಾನ ನೀಡುವ ದಾನಿಗಳಿಗೆ ದೇವರು ಕೋಟಿ ಕೋಟಿ ಕೂಡಿಸಿ ಕೊಡಲಿ. ಪಟ್ಲರಿಗೆ ದೇವರು ಆಯುಷ್ಯ, ಆರೋಗ್ಯ ನೀಡಲೆಂದು ಹಾರೈಸಿದರು. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ೧ ಎಕ್ರೆ ಭೂಮಿಯನ್ನು ಫೌಂಡೇಶನಿಗೆ ನೀಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ