Slider


ಉಡುಪಿ:-ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ : ಉಸ್ತುವಾರಿ ಸಚಿವ ಎಸ್.ಅಂಗಾರ23-5-2022


 ಉಡುಪಿ:- ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯ ರಾಷ್ಟ್ರಿಯಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ರಸ್ತೆ, ಜಿಲ್ಲಾ ಪಂಚಾಯತ್ ರಸ್ತೆ, ಗ್ರಾಮೀಣ ರಸ್ತೆಗಳು ಸೇರಿದಂತೆ ಯಾವುದೇ ರಸ್ತೆಯಲ್ಲಿ ಮಳೆಯ ನೀರು ನಿಲ್ಲದೇ, ಸರಾಗವಾಗಿ ಹರಿದುಹೋಗುವ ಕುರಿತಂತೆ ರಸ್ತೆ ಪಕ್ಕದ ಚರಂಡಿಗಳನ್ನು ಸ್ವಚ್ಛಗೊಳಿಸಿ, ಯಾವುದೇ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು.



    ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಮಾನ್ಸೂನ್ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.



    ಮಳೆ ಸಂದರ್ಭದಲ್ಲಿ ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಬರುತ್ತಿದ್ದು, ರಸ್ತೆ ನಿರ್ಮಾಣ ಸಂದರ್ಭದಲ್ಲಿ ರೂಪಿಸಿದ್ದ ಯೋಜನೆಯಂತೆ ಮಳೆ ನೀರು ಹರಿಯಲು ಅಗತ್ಯ ವ್ಯವಸ್ಥೆ ಮಾಡಬೇಕು. ಅವೈಜ್ಞಾನಿಕವಾಗಿ ಮಾಡಿರುವ ಕಾಮಗಾರಿಗಳನ್ನು ತೆರವುಗೊಳಿಸಬೇಕು. 




ಈ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್, ಪುರಸಭೆ ಅಧಿಕಾರಿಗಳು ಸ್ಥಳ ಭೇಟಿ ನೀಡಿ, ಪರಿಶೀಲಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಯಾವುದೇ ಭಾಗದಲ್ಲಿ ಮಳೆಯಿಂದ ಅವಘಡಗಳು ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, 2 ದಿನದಲ್ಲಿ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.



     ಉಡುಪಿ ನಗರಸಭೆ ಮತ್ತು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಖಾಸಗಿ ಜಾಗದಲ್ಲಿ ಮಳೆ ನೀರು ಹರಿಯುವ ಜಾಗದಲ್ಲಿ ತಡೆ ಹಾಕಿರುವ ಬಗ್ಗೆ ಕಂಡು ಬಂದಲ್ಲಿ ಅದನ್ನು ಯಾವುದೇ ಮುಲಾಜಿಲ್ಲದೇ ಅದನ್ನು ಒಡೆದು ಹಾಕಿ, ಖಾಸಗಿ ವ್ಯಕ್ತಿಗಳು ಈ ಕಾರ್ಯಕ್ಕೆ ಅಡಚಣೆ ಮಾಡಿದಲ್ಲಿ ಪ್ರಾಕೃತಿಕ ವಿಕೋಪ ಕಾಯ್ದೆಯಡಿ ನೀಡಿರುವ ಅಧಿಕಾರ ಚಲಾಯಿಸಿ, ಅಗತ್ಯ ಕ್ರಮ ಕೈಗೊಳ್ಳಿ ಎಂದರು.



    ಜಿಲ್ಲೆಯಲ್ಲಿ ರಸ್ತೆ ಬದಿಗಳಲ್ಲಿ ಇರುವ ಅಪಾಯಕಾರಿ ಮರಗಳ ವಿವರಗಳನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಪಟ್ಟಿ ಮಾಡಿ, ಅರಣ್ಯ ಇಲಾಖೆಗೆ ಸಲ್ಲಿಸುವಂತೆ ತಿಳಿಸಿದ ಸಚಿವರು, ಅರಣ್ಯ ಇಲಾಖೆಯಿಂದ ಆದ್ಯತೆಯ ಮೇಲೆ ಅವುಗಳನ್ನು ತೆರವುಗೊಳಿಸಲು ಅನುಮತಿ ನೀಡಬೇಕು. ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ತಮ್ಮ ಕೆಳಹಂತದ ಸಿಬ್ಬಂದಿಗಳಿಗೂ ಅಗತ್ಯ ನಿರ್ದೇಶನಗಳನ್ನು ನೀಡಿ, ಮಳೆಯಿಂದ ಬಿದ್ದ ಮರಗಳನ್ನು ತಕ್ಷಣ ತೆರವುಗೊಳಿಸಲು ಮತ್ತು ಅಪಾಯಕಾರಿ ಮರಗಳ ತೆರವು ಕುರಿತು ಕೋರುವ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಸೂಚಿಸಿದರು.


     ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ಅಗತ್ಯವಿರುವ ಎಲ್ಲಾ ರಕ್ಷಣಾ ಪರಿಕರಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಹಾಗೂ ಅಗತ್ಯವಿದ್ದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಬೋಟುಗಳನ್ನು ಪಡೆಯುವಂತೆ ಸೂಚಿಸಿದರು.


     ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಉಲ್ಬಣವಾಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆಗಳ ಸಮೀಪ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳ ಬೆಳವಣಿಗೆ ತಡೆಯುವ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೂಲಕ ಮನೆ ಮನೆಗೆ ಸ್ವಚ್ಚತೆ ಕಾಪಾಡುವ ಕುರಿತಂತೆ ಸಂದೇಶ ರವಾನಿಸಲು ಕ್ರಮ ಕೈಗೊಳ್ಳಿ. ವಲಸೆ ಕಾರ್ಮಿಕರು ವಾಸಿಸುವ ಪ್ರದೇಶದಲ್ಲಿ ನಿಗಾ ವಹಿಸಿ ಎಂದರು. 


     ಶಾಸಕ ರಘುಪತಿ ಭಟ್ ಮಾತನಾಡಿ, ಮಳೆಯಿಂದ ಮನೆಗಳಿಗೆ ಆಗುವ ಹಾನಿಗೆ ನೀಡುವ ಪರಿಹಾರ ಅತ್ಯಂತ ಕಡಿಮೆ ಇದೆ ಎಂದರು. ಈ ಕುರಿತಂತೆ ಮಳೆಯಿಂದ ಮನೆ ಮತ್ತು ಆಸ್ತಿ-ಪಾಸ್ತಿಗಳು ಹಾನಿಯಾದ ಸಂದರ್ಭದಲ್ಲಿ ನಷ್ಠದ ಅಂದಾಜು ಮಾಡುವಾಗ, ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಪ್ರಕರಣಗಳನ್ನು ಗಮನಿಸಿ, ಸಂತ್ರಸ್ಥರಿಗೆ ಗರಿಷ್ಠ ನೆರವು ಒದಗಿಸಬೇಕು ಎಂದು ಸಚಿವರು ಹೇಳಿದರು. 

    ಜಿಲ್ಲೆಯಲ್ಲಿ ಮಾನ್ಸೂನ್ನಿಂದ ಆಗುವ ಹಾನಿಯನ್ನು ತಪ್ಪಿಸಲು ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಕ್ಲಿಷ್ಟಕರ ಸಮಸ್ಯೆಯಿದ್ದಲ್ಲಿ ಕೂಡಲೇ ತಮ್ಮ ಗಮನಕ್ಕೆ ತರುವಂತೆ ಸರ್ಕಾರದಿಂದ ತಿಳಿಸಿದ ಸಚಿವರು, ತುರ್ತು ನೆರವಿನ ಅಗತ್ಯವಿದ್ದಲ್ಲಿ ಯಾವುದೇ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸುವAತೆ ಅಧಿಕಾರಿಗಳಿಗೆ ತಿಳಿಸಿದರು.    

    ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕರಾವಳಿ ಕಾವಲು ಪಡೆ ಎಸ್ಪಿ ಅಂಶುಕುಮಾರ್, ಅಪರ ಜಿಲ್ಲಾಧಿಕಾರಿ ವೀಣಾ, ಕುಂದಾಪುರ ಡಿಎಫ್ಓ ಆಶೀಶ್ ರೆಡ್ಡಿ, ಕಾರ್ಕಳ ಡಿಎಫ್ಓ ಗಣಪತಿ, ಎಎಸ್ಪಿ ಸಿದ್ಧಲಿಂಗಪ್ಪ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo