ಶಾಲಾ ಪಠ್ಯ ಪುಸ್ತಕದಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಪಠ್ಯ ಕೈ ಬಿಟ್ಟು ಬಿಜೆಪಿ ಡೋಂಗಿ ಎಂದು ತೋರಿಸುತ್ತದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ದೀಪ ಆರುವ ಮುಂಚೆ ಜೋರಾಗಿ ಉರಿಯುವಂತೆ ಬಿಜೆಪಿ ಪರಿಸ್ಥಿತಿ. ನಾರಾಯಣ ಗುರುಗಳ ವಿಚಾರ ಕೈ ಬಿಟ್ಟಿರುವುದು ಬಿಜೆಪಿಯದ್ದು ವಿನಾಶಕಾಲೆ ವಿಪರೀತ ಬುದ್ದಿ. ದೇಶದಲ್ಲಿ ತೀವ್ರ ಅಸ್ಪ್ರಶ್ಯತೆ, ಶೋಷಣೆ ಇದ್ದ ಕಾಲದಲ್ಲಿ ಪೆರಿಯರ್, ನಾರಾಯಣ ಗುರುಗಳಂತವರು ಹೋರಾಟ ನಡೆಸಿದ್ದರು. ಅವರು ಸಾಮಾಜಿಕ, ಧಾರ್ಮಿಕ ಸುಧಾರಣೆ ಮಾಡುವುದು ಕಷ್ಟದ ಕೆಲಸವಾಗಿದ್ದ ಆ ಕಾಲದಲ್ಲಿ ಶೋಷಿತ ಬಿಲ್ಲವ ಸಮಾಜವನ್ನು ಮುಂದಿಟ್ಟುಕೊಂಡು ಇತರ ಶೋಷಿತ ಸಮುದಾಯಕ್ಕೂ ದಾರಿದೀಪವಾದವರು ಎಂದರು.
ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣ ಗುರುಗಳ ಸ್ಥಬ್ದ ಚಿತ್ರ ಪ್ರದರ್ಶಿಸಲು ಧಿಕ್ಕರಿಸಿದ್ದು, ಇಂದು ಪಠ್ಯದಲ್ಲಿ ಗುರುಗಳ ವಿಚಾರ ಕೈ ಬಿಟ್ಟಿದ್ದಾರೆ. ಬಿಲ್ಲವ ಸಮುದಾಯದ ಬಗ್ಗೆ ಭಾಷಣ ಮಾಡಿ ಹೋಟೆಲ್ ಕೇಳಿದ ಬಿಜೆಪಿಯ ಬಿಲ್ಲವ ಮುಖಂಡರು ಹಾಗೂ ಕಾರ್ಕಳದ ಕೆಲವು ಬಿಲ್ಲವ ನಾಯಕರು ಈಗ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು ಸೂಚಿಸುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರು ರೈಲ್ವೇ ನಿಲ್ದಾಣಕ್ಕೆ ನಾರಾಯಣ ಗುರುಗಳ ಮತ್ತು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಅವರ ಹೆಸರಿಡುವಂತೆ ಕೇಳಲು ಆಗುವುದಿಲ್ಲವೇ? ದೇಶದಲ್ಲಿ ಹಿಂದುಳಿದ ವರ್ಗದವರನ್ನು ಮುಗಿಸುವ ಮತ್ತು ಮೇಲ್ವರ್ಗದವರನ್ನು ಜೀವಂತವಾಗಿರಿಸುವ ಉದ್ದೇಶದಿಂದ ಬಿಜೆಪಿ ಹೀಗೆ ನಡೆದುಕೊಳ್ಳುತ್ತಿದೆ ಎಂದು ದೀಪಕ್ ಕೋಟ್ಯಾನ್ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ