ಮುಲ್ಕಿ:ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಕೇವಲ ಧಾರ್ಮಿಕ ಲೋಕದ ಧರ್ಮದರ್ಶಿಯಾಗಿರಲಿಲ್ಲ. ಅವರು ಸಾಹಿತ್ಯ, ಕ್ರೀಡೆ, ಸಮಾಜ ಸೇವೆ, ಸಂಸ್ಕೃತಿ, ಸಾಂಸ್ಕೃತಿಕ ಲೋಕ ಹೀಗೆ ಆಯಾ ಕ್ಷೇತ್ರದ ಧರ್ಮವನ್ನು ಅರಿತು ಅವುಗಳನ್ನು ಪಾಲಿಸಿಕೊಂಡು ಬಂದ ನಿಜವಾದ ‘ಧರ್ಮದರ್ಶಿ’. ಮಂಗಳೂರು ವಿವಿಯು ಗೌರವ ಡಾಕ್ಟರೇಟ್ ನೀಡುವ ಮೂಲಕ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸಿದೆ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಹರಿಕೃಷ್ಣ ಪುನರೂರು ರವರನ್ನು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಗೌರವಿಸಿದ ಬಳಿಕ ಮಾತನಾಡಿದರು
ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ರವರು ಸಾಹಿತ್ಯ, ಕ್ರೀಡೆ, ಸಮಾಜ ಸೇವೆ, ಸಾಂಸ್ಕೃತಿಕ ಸೇವೆಗಾಗಿ ಕೇಂದ್ರ ಸರಕಾರವು ನೀಡುವ ಪದ್ಮಶ್ರೀ ಪುರಸ್ಕಾರ ಪಡೆಯಲು ಅರ್ಹರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರವು ಇವರ ಸೇವೆಯನ್ನು ಪರಿಗಣಿಸಿ, ಗುರುತಿಸುವ ಕೆಲಸ ಮಾಡಬೇಕು.ಇದರಿಂದ ಇನ್ನಷ್ಟು ಮಂದಿಗೆ ತಮ್ಮನ್ನು ಸಮಾಜ ಸೇವೆಗೆ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಉದ್ಯಮದಿಂದ ಬಂದ ಲಾಭದಿಂದ ನೂರಾರು ವಸತಿ ನಿರ್ಮಾಣ ಮಾಡಿ ಬಡವರಿಗೆ ಆಶ್ರಯ ನೀಡಿದ ಆಶ್ರಯದಾತರಾದ ಪುನರೂರು ಅವರು, ಸಾಹಿತ್ಯ, ಸಾಂಸ್ಕೃತಿಕ ಲೋಕದ ಪೋಷಕರಾಗಿ ಸೇವೆ ಮಾಡಿದ್ದಾರೆ.
ಸಾಹಿತಿಯಲ್ಲದವರು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಏನು ಮಾಡಬಹುದು ಎಂದು ಪ್ರಶ್ನಿಸಿದ ಪ್ರಶ್ನಾಕಾರರಿಗೆ, ಕನ್ನಡ ಸಾಹಿತ್ಯ ಪರಿಷತ್‌ಗೆ ಹೊಸ ಸ್ವರೂಪ ನೀಡುವ ಮೂಲಕ ಕನ್ನಡ ನಾಡು, ನುಡಿ, ಭಾಷೆಗಾಗಿ ಹೋರಾಟ ನಡೆಸುವ ಮೂಲಕ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವುದರೊಂದಿಗೆ ಸಾಹಿತಿಗಳಿಗೆ ನಾನಾ ವೇದಿಕೆಯನ್ನು ಕಲ್ಪಿಸುವ ಮೂಲಕ ಕ್ರಾಂತಿ ಮಾಡಿದ ಸಂಘಟಕ. ಹೀಗಾಗಿ ನಿಜವಾದ ಅರ್ಥದ ಸಾಹಿತ್ಯ ಧರ್ಮದರ್ಶಿಯಾಗಿದ್ದಾರೆ. ಪುನರೂರು ಅವರ ಹಡೆದ ತಾಯಿ ತುಳುದೇವಿಯಾದರೆ ಅವರ ಪಡೆದ ತಾಯಿ ಕನ್ನಡಾಂಬೆಯ ವಾತ್ಸಲ್ಯದ ವೃಕ್ಷದಲ್ಲಿ ಬೆಳೆದು ಯಶಸ್ಸಿನ ಕುಸುಮವಾಗಿದ್ದಾರೆ ಎಂದರು.
ಈ ಸಂದರ್ಭ ಉಷಾ ಹರಿಕೃಷ್ಣ ಪುನರೂರು, ಪುನರೂರು ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಉದ್ಯಮಿ ರಾಮಮೂರ್ತಿರಾವ್,ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಸಿ ಭಟ್, ಸಂಚಾಲಕ ಪುನೀತ್ ಕೃಷ್ಣ, ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುಧಾಕರ್ ರಾವ್ , ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸುರೇಶ್ ರಾವ್ ನೀರಳಿಕೆ ರಾಘವೇಂದ್ರರಾವ್ ಕೆರೆಕಾಡು, ಪುರಂದರ ಶೆಟ್ಟಿಗಾರ್, ಪಟೇಲ್ ವಿಶ್ವನಾಥ ರಾವ್, ಗೋಪಿನಾಥ್ ರಾವ್, ದೇವಸ್ಥಾನದ ಅರ್ಚಕ ಶಶಾಂಕ್ ಮುಚ್ಚಿಂತಾಯ, ಧನಂಜಯ ಶೆಟ್ಟಿಗಾರ್, ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ