ಇಮ್ರಾನ್ ಖಾನ್ ಪಾಲಿಗೆ ಇಂದು ಮಾಡು ಇಲ್ಲವೆ ಮಡಿ ದಿನವಾಗಿದೆ. ಖಾನ್ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ಆಧರಿಸಿ, ಅವಿಶ್ವಾಸ ನಿರ್ಣಯದ ಮೇಲೆ ಪಾಕಿಸ್ತಾನ ಸಂಸತ್ತು ಇಂದು ಮತ ಚಲಾಯಿಸಲಿದೆ. ಇದೇ ವೇಳೆ ರಾಷ್ಟ್ರವನ್ನುದ್ದೇಶಿಸಿ ಇಮ್ರಾನ್ ಖಾನ್ ಮಾತನಾಡುತ್ತಾ ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ʻಭಾರತದ ವಿದೇಶಾಂಗ ನೀತಿ ಉತ್ತಮವಾಗಿದ್ದು, ಯಾವುದೇ ಮಹಾಶಕ್ತಿ ಭಾರತಕ್ಕೆ ಷರತ್ತುಗಳನ್ನು ವಿಧಿಸುವ ಮೂಲಕ ಆ ದೇಶವನ್ನು ತಡೆಯಲು ಸಾಧ್ಯವಿಲ್ಲ, ನೀವು ಇಂತಹದ್ದನ್ನೇ ಪಾಲಿಸಬೇಕು ಎಂದು ನಿರ್ದೇಶಿಸುವ ಯಾರ ಅಪ್ಪಣೆಯನ್ನೂ ಭಾರತ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ತಮ್ಮ ಹಿತಾಸಕ್ತಿಗಳಿಗೆ ಅನುಸಾರವಾಗಿ ಭಾರತ ನಡೆದುಕೊಳ್ಳಬೇಕು ಎಂದು ಯಾವ ದೊಡ್ಡ ಶಕ್ತಿಯೂ ಭಾರತವನ್ನು ಒತ್ತಾಯಿಸಲು ಸಾಧ್ಯವಿಲ್ಲ. ಕೆಲ ಪಾಶ್ಚಾತ್ಯ ರಾಷ್ಟ್ರಗಳ ಒತ್ತಡ ಹೇರಲು ಪ್ರಯತ್ನಿಸಿದರೂ ಅವರು ಅವುಗಳನ್ನು ಅಲಕ್ಷಿಸಿ ರಷ್ಯಾದಿಂದ ತೈಲ ಖರೀದಿಸಿದರು ಎಂದು ಹೇಳಿದ್ದಾರೆ.
ತನಗೆ ಭಾರತದ ಬಗ್ಗೆ ಎಲ್ಲರಿಗಿಂತಲೂ ಹೆಚ್ಚು ತಿಳಿದಿದೆ ಎಂದು ಸ್ಮರಿಸಿರುವ ಅವರು, ಕ್ರಿಕೆಟಿಗರಿಂದಾಗಿ ಭಾರತದೊಂದಿಗೆ ಹೆಚ್ಚಿನ ಸ್ನೇಹ ಬೆಳೆದಿದೆ. ಭಾರತದಲ್ಲಿ ಪ್ರೀತಿ ಮತ್ತು ಆಪ್ಯಾಯಮಾನತೆಯೊಂದಿಗೆ ಗೌರವ ಸಹ ದೊರೆತಿದೆ. ಆದರೆ ನಮ್ಮ ದೇಶದಲ್ಲಿ ವಿರೋಧ ಪಕ್ಷಗಳು ತೊಂದರೆ ಕೊಡುವುದನ್ನೇ ಕಾಯಕವಾಗಿಸಿಕೊಂಡಿವೆ ಎಂದರು.
ಇದೇವೇಳೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆದರಿಕೆಗಳು ಬರುತ್ತಿವೆ ಎಂಬ ಆರೋಪ ಮಾಡಿದ್ದಾರೆ. ಈ ಬಗ್ಗೆ ಅಮೆರಿಕಾವನ್ನು ದೂಷಿಸಿದ್ದು, ರಷ್ಯಾ-ಉಕ್ರೇನ್ ಯುದ್ಧ ಸಂದರ್ಭದಲ್ಲಿ ನಾನು ರಷ್ಯಾದಲ್ಲಿ ಪ್ರಯಾಣ ಬೆಳೆಸಿದ್ದು ಅಮೆರಿಕಾಗೆ ಹಿಡಿಸಲಿಲ್ಲ ಹಾಗಾಗಿ ನಮ್ಮ ಮೇಲೆ ತಮ್ಮ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ