Slider


ದ್ವಿತೀಯ ಪಿ.ಯು.ಸಿ ಪರೀಕ್ಷೆಗೂ ಹಿಜಾಬ್‌ ಸೇರಿದಂತೆ ಯಾವುದೇ ಧರ್ಮ ಸೂಚಕ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ:-ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ 7-4-2022

ಬೆಂಗಳೂರು : ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಮಾದರಿಯಲ್ಲೇ ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಗೂ ಹಿಜಾಬ್‌ ಸೇರಿದಂತೆ ಯಾವುದೇ ಧರ್ಮ ಸೂಚಕ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ. ಈ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ಹೈಕೋರ್ಟ್‌ ತೀರ್ಪಿನ ಅನ್ವಯವೇ ನಾವು ಈ ತೀರ್ಮಾನ ಕೈಗೊಂಡಿದ್ದೇವೆ'ಎಂದು ಸ್ಪಷ್ಟಪಡಿಸಿರುವ ಸಚಿವರು ಈಗಾಗಲೇ ನಡೆಯುತ್ತಿರುವ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಇರುವ ಕಾನೂನನ್ನೇ ಏಪ್ರಿಲ್‌ 22 ರಿಂದ ಮೇ 18 ರವರೆಗೆ ನಡೆಯುವ ದ್ವಿತೀಯ ಪಿ.ಯು.ಸಿ ಪರೀಕ್ಷೆಗೂ ಅನ್ವಯ ಮಾಡಲಾಗುವುದು ಎಂದು ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಿ.ಯು ಇಲಾಖೆಯು ಈ ಸಂಬಂಧ ಪರೀಕ್ಷೆ ವೇಳೆಗೆ ಅಧಿಕೃತ ಆದೇಶ ಹೊರಡಿಸಲಿದ್ದು ಆದೇಶವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶದ ಅನ್ವಯ ಹಿಜಾಬ್‌ ಮಾತ್ರವಲ್ಲ ಯಾವುದೇ ಧರ್ಮಸೂಚಕ ವಸ್ತ್ರಗಳನ್ನು ಧರಿಸಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಬರುವಂತಿಲ್ಲ. ಆಯಾ ಕಾಲೇಜಿನಲ್ಲಿ ನಿಗದಿಪಡಿಸಿರುವ ಸಮವಸ್ತ್ರ ಧರಿಸಿ ಮಾತ್ರ ಬರಬೇಕು ಎಂದು ತಿಳಿಸಿದರು.

ಶಾಲಾ ಮಕ್ಕಳ ರೀತಿ ಎಲ್ಲಾ ಪಿ.ಯು ಕಾಲೇಜುಗಳಲ್ಲೂ ಸಮವಸ್ತ್ರ ನಿಗದಿಯಾಗಿಲ್ಲ. ಅಂತಹ ಕಾಲೇಜಿನ ಮಕ್ಕಳಿಗೆ ಯಾವ ವಸ್ತ್ರಸಂಹಿತೆ ಇರುತ್ತದೆ?' ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು 'ಹಾಗೆ ನೋಡಿದರೆ ರಾಜ್ಯದಲ್ಲೆಡೆಯ ಜಿಲ್ಲಾ ಮಟ್ಟದ ಶೇ.90 ರಷ್ಟುಕಾಲೇಜುಗಳಲ್ಲಿ ಸಮವಸ್ತ್ರ ಇದೆ. ಶೇ.10 ರಷ್ಟು ಕಾಲೇಜುಗಳಲ್ಲಿ ಮಾತ್ರ ಇಲ್ಲ. 

ಯಾವ ಯಾವ ಕಾಲೇಜಿನಲ್ಲಿ ಆಯಾ ಕಾಲೇಜಿನ ಅಭಿವೃದ್ಧಿ ಸಮಿತಿಗಳು ಸಮವಸ್ತ್ರ ನಿಗದಿಪಡಿಸಿವೆಯೇ ಅಲ್ಲಿ ಮಕ್ಕಳು ಸಮವಸ್ತ್ರ ಧರಿಸಿ ಬರಬೇಕು. ಸಮವಸ್ತ್ರ ಇಲ್ಲದ ವಿದ್ಯಾರ್ಥಿಗಳು ಯಾವುದೇ ಧರ್ಮ ಸೂಚಕ ವಸ್ತ್ರಗಳಲ್ಲದ ಉಡುಪು ತೊಟ್ಟು ಬಂದು ಪರೀಕ್ಷೆ ಬರೆಯಬಹುದು. ಸಿ.ಡಿ.ಸಿ ನಿಗದಿಪಡಿಸಿರುವ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo