ಉಡುಪಿ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ತಹಶೀಲ್ದಾರ್ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದರು.
ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಗ್ರಾಮಗಳು ಮತ್ತು ನಗರ ಪ್ರದೇಶದ ವಾರ್ಡ್ಗಳ ಪಟ್ಟಿ ಮಾಡಿಕೊಂಡು, ಆ ಪ್ರದೇಶಗಳಲ್ಲಿ ಈ ಬಾರಿ ಸಮಸ್ಯೆ ತಲೆದೋರದಂತೆ, ನೀರಿನ ಸರಬರಾಜು ಮಾಡಲು ತಕ್ಷಣದಿಂದಲೇ ಯೋಜನೆ ರೂಪಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಮಸ್ಯೆ ಕಂಡು ಬಂದಲೇ ನೀರು ಸರಬರಾಜು ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರದಂತೆ ಸಾಕಷ್ಟು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಬೆಳೆಹಾನಿ, ಪ್ರಾಕೃತಿಕ ವಿಕೋಪ ಹಾನಿಯ ವಿವರಗಳನ್ನು ದಾಖಲಿಸಲು ವೆಬ್ ಆಧಾರಿತ ತಂತ್ರಜ್ಞಾನ ಇದ್ದು, ಇದರಲ್ಲಿಯೇ ಎಲ್ಲಾ ಹಾನಿಯ ವಿವರಗಳನ್ನು ದಾಖಲಿಸಿ. ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಸಲುವಾಗಿ, ನಿರ್ಮಿಸಲು ಉದ್ದೇಶಿಸಿರುವ ಡಿಜಿಟಲ್ ರೇಡಿಯೋ ಟವರ್ ಮತ್ತು ಸೈರನ್ ಟವರ್ಗಳನ್ನು ಅಳವಡಿಸಲು, ಈಗಾಗಲೇ ಗುರುತಿಸಲಾಗಿರುವ ಸ್ಥಳದಲ್ಲಿ ಶೀಘ್ರದಲ್ಲಿ ಟವರ್ ಅಳವಡಿಕೆ ಕಾರ್ಯಗಳನ್ನು ಪೂರ್ಣಗೊಳಿಸಿ ಎಂದು ತಿಳಿಸಿದರು.
ವಿಕೋಪಕ್ಕೆ ಸಿಲುಕಿದವರನ್ನು ರಕ್ಷಿಸಲು ರಕ್ಷಣಾ ಕಾರ್ಯದಲ್ಲಿ ತೊಡಗುವ ಸಂಬAಧಪಟ್ಟ ಇಲಾಖೆಗಳು, ತಮಗೆ ಅಗತ್ಯವಿರುವ ರಕ್ಷಣಾ ಉಪಕರಣಗಳ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ, ಅವುಗಳನ್ನು ಸರಬರಾಜು ಮಾಡಲಾಗುವುದು. ಈಗಾಗಲೇ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಖಾತೆಯಲ್ಲಿ ವಿಕೋಪ ನಿರ್ವಹಣೆಗೆ ಮೊತ್ತವನ್ನು ಹಂಚಿಕೆ ಮಾಡಿದ್ದು, ಜಿಲ್ಲಾ ಪ್ರಾಕೃತಿಕ ವಿಕೋಪದ ನಿಧಿಯಲ್ಲಿ ಸಾಕಷ್ಟು ಅನುದಾನವಿದ್ದು, ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪಡೆಯ ಎಸ್ಪಿ ಅಂಶು ಕುಮಾರ್, ಅಪರ ಜಿಲ್ಲಾಧಿಕಾರಿ ವೀಣಾ, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಎಎಸ್ಪಿ ಸಿದ್ಧಲಿಂಗಪ್ಪ, ರಾಜ್ಯ ಯೋಜನಾ ಅನುಷ್ಠಾನ ಘಟಕದ ಯೋಜನಾ ವ್ಯವಸ್ಥಾಪಕ ಡಾ.ರಾಜ್ಕುಮಾರ್ ಪೂಜಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ