ಸಹಬಾಳ್ವೆ ಉಡುಪಿ ಹಾಗೂ ಕರ್ನಾಟಕ ಪ್ರಗತಿಪರರ ಸಂಘಟನೆಗಳ ಒಕ್ಕೂಟದಿಂದ ಮೇ 7 ರಂದು ಉಡುಪಿಯಲ್ಲಿ ಸೌಹಾರ್ದ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಹಬಾಳ್ವೆ ಸಂಘಟನೆ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಶತಮಾನಗಳಿಂದ ನಾಡಿನಲ್ಲಿ ಹಲವು ಜಾತಿ, ಮತ, ವಿಚಾರ, ಪಂಥಗಳ ಜನರೆಲ್ಲರೂ ಸೌಹಾರ್ದಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ.
ಆಯಾ ಕಾಲಗಳ ಕಷ್ಟ-ಸುಖಗಳನ್ನು ಜನರು ಸಹಬಾಳ್ವೆಯೊಳಗೆ ಹಂಚಿಕೊಂಢು ಬದುಕಿದ್ದಾರೆ.
ಈಚೆಗೆ ಅಧಿಕಾರ ಹಾಗೂ ರಾಜಕಾರಣಕ್ಕಾಗಿ ಧರ್ಮಗಳ ನಡುವೆ, ಪಂಥಗಳ ನಡುವೆ, ಮತಗಳ ನಡುವೆ ಮತ ದ್ವೇಷ ಸೃಷ್ಟಿಸುವ ಕೆಲಸಗಳು ನಡೆಯುತ್ತಿವೆ. ಉಡುವ ಬಟ್ಟೆ, ದೈನಂದಿನ ವ್ಯಾಪಾರ ವ್ಯವಹಾರಗಳಲ್ಲೂ ಮತ ಭೇದ ಸೃಷ್ಟಿಸಲಾಗುತ್ತಿದೆ. ಮತಗಳ ಮಧ್ಯೆ ದ್ವೇಷದ ದಳ್ಳುರಿ ಹಬ್ಬಿಸುವ ಆತಂಕಕಾರಿ ವಿದ್ಯಮಾನಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೌಹಾರ್ದಯುತ ಸಹಬಾಳ್ವೆ ಬಯಸುವ ಜನರೆಲ್ಲರೂ ಎಚ್ಚೆತ್ತುಕೊಂಡು ಸಹಬಾಳ್ವೆಯನ್ನು ಉಳಿಸಿ ಪೋಷಿಸುವ ಕಾರ್ಯ ಮಾಡಬೇಕು. ಇದು ಇಂದಿನ ತುರ್ತು ಕಾರ್ಯವಾಗಿದ್ದು, ರಾಜ್ಯದಲ್ಲಿ ಸೌಹಾರ್ದಯುತ ಸಹಬಾಳ್ವೆ ಬಯಸುವ ಪ್ರಗತಿಪರ ಸಂಘಟನೆಗಳೆಲ್ಲ ಒಗ್ಗೂಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಮುಖಂಡರಾದ ಸುಂದರ್ ಮಾಸ್ತರ್, ಪ್ರಶಾಂತ್ ಜತ್ತನ್ನ, ವೆರೋನಿಕಾ ಕರ್ನೆಲಿಯೊ, ಹುಸೇನ್ ಕೊಡಿಬೆಂಗ್ರೆ, ಅಜೀಜ್ ಉದ್ಯಾವರ ಇದ್ದರು.
.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ