Slider

ಅಸಮಾನತೆ ನಿವಾರಣೆಗಾಗಿ ಡಾ. ಬಾಬು ಜಗಜೀವನ್ ರಾಂ ಹೋರಾಟ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.6-4-2022

ಅಸಮಾನತೆ ನಿವಾರಣೆಗಾಗಿ ಡಾ. ಬಾಬು ಜಗಜೀವನ್ ರಾಂ ಹೋರಾಟ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

       ಉಡುಪಿ:-ವಿವಿಧ ಜಾತಿ ಮತ್ತು ವರ್ಗಗಳ ನಡುವಿನ ಅಸಮಾನತೆಯನ್ನು ತೊಡೆದು ಹಾಕಿ ಸಮಾನತೆಯನ್ನು ಮೂಡಿಸುವಲ್ಲಿ ಡಾ. ಬಾಬು ಜಗಜೀವನ ರಾಂ ಅವಿರತವಾಗಿ ಶ್ರಮಿಸಿದ್ದರು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.

     ಅವರು ಇಂದು ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಹಾಗೂ ಪ.ಜಾತಿ ಮತ್ತು ಪ.ವರ್ಗಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ತಮ್ಮ ಬಾಲ್ಯದಿಂದಲೇ ಅಸಮಾನತೆ ವಿರುದ್ಧ ಹೋರಾಟ ಆರಂಭಿಸಿದ್ದ ಡಾ.ಬಾಬು ಜಗಜೀವನ ರಾಂ ಅವರು ಕೇಂದ್ರ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಸದಾ ಆಧ್ಯಯನ ಶೀಲರಾಗಿದ್ದ ಅವರು ಉತ್ತಮ ಜ್ಞಾನ ಸಂಪಾದನೆ ಮಾಡಿದ್ದರು. ಅವರ ಹೋರಾಟ ಹಾಗೂ ಜೀವನದ ಮೌಲ್ಯಗಳು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಹಾಗೂ ಇವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಇಂತಹ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಬೇಕು ಎಂದರು.

    ಡಾ.ಬಾಬು ಜಗಜೀವನ ರಾಂ ಅವರ ವ್ಯಕ್ತಿತ್ವದ ಕುರಿತು ಉಪನ್ಯಾಸ ನೀಡಿದ, ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೂವಾಡಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂದಿಗೂ ಮರೆಯದ ಮತ್ತು ಮರೆಯಬಾರದ ವ್ಯಕ್ತಿತ್ವ ಬಾಬು ಜಗಜೀವನ ರಾಂ ಅವರದ್ದು. ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ ಅವರಿಗೆ ನೀಡುವ ಗೌರವ ಇವರಿಗೂ ಸಲ್ಲಬೇಕು. ತಮ್ಮ ಅಧಿಕಾರಾವಧಿಯಲ್ಲಿ ಕಾರ್ಮಿಕರ, ಶೋಷಿತರ ಪರ ದನಿಯಾಗಿ, ರೈತರಲ್ಲಿ ಹೋರಾಟ ಮತ್ತು ಪ್ರತಿರೋಧದ ಪ್ರಜ್ಞೆ ಭಿತ್ತಿದ್ದರು. ರೈತರು ಮತ್ತು ಸೈನಿಕರಿಗೆ ಬೆನ್ನೆಲುಬಾಗಿ ವಿವಿಧ ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸಿ, ಬಾಬೂಜಿ ಎಂದು ಪ್ರಸಿದ್ಧರಾಗಿದ್ದರು. ಸಂವಿಧಾನ ಕರಡು ರಚನಾ ಸಮಿತಿ ಸದಸ್ಯರಾಗಿ, ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಎಲ್ಲಾ ವರ್ಗದ ನಡುವೆ ಸಮಾನತೆ ತರಲು ಶ್ರಮಿಸಿದ್ದರು. ಹಸಿರುಕ್ರಾಂತಿ ಮತ್ತು ಸಂಪರ್ಕ ಕಾಂತಿಯ ಹರಿಕಾರರಾಗಿದ್ದರು ಎಂದರು.

    ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಅಪರ ಜಿಲ್ಲಾಧಿಕಾರಿ ವೀಣಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪ.ಜಾತಿ ಮತ್ತು ಪ.ವರ್ಗಗಳ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

   ಕಾರ್ಯಕ್ರಮದಲ್ಲಿ ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ, ಡಾ. ಬಾಬು ಜಗಜೀವನ ರಾಂ ಅವರ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

    ಉಡುಪಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ಸ್ವಾಗತಿಸಿದರು. ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಪ್ರೊ.ಡಾ.ನಿರ್ಮಲಾ ಕುಮಾರಿ ವಂದಿಸಿದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo