ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಕಮೀಷನ್ ಆರೋಪ ಮಾಡಿದ್ದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ಉಡುಪಿಯ ಲಾಡ್ಜ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಂಗಳವಾರ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದ್ದು, ನಿನ್ನೆ ತಡರಾತ್ರಿಯೆ ಅವರು ಆತ್ಮಹತ್ಯೆ ನೋಟ್ ಬರೆದು ಅದನ್ನು ಮಾಧ್ಯಮ ಪತ್ರಿನಿಧಿಗಳಿಗೆ ಕಳುಹಿಸಿದ್ದರು ಎನ್ನಲಾಗಿದೆ.
ಅವರು ಬರೆದಿದ್ದಾರೆ ಎಂದು ಎನ್ನಲಾಗಿರುವ ಡೆತ್‌ನೋಟ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅವರಲ್ಲಿ ಅವರು, “ನನ್ನ ಸಾವಿಗೆ ನೇರ ಕಾರಣ ಸಚಿವ ಕೆ.ಎಸ್. ಈಶ್ವರಪ್ಪ. ಅವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ” ಎಂದು ಬರೆದಿದ್ದಾರೆ.
“ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಹಾಗೆ ಅವರಿವರಿಂದನೆ ಎಲ್ಲರು ಸಹಾಯ ಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು” ಎಂದು ಬರೆದಿದ್ದಾರೆ.
ಪತ್ರದಲ್ಲಿ ಅವರು “ನನ್ನ ಜೊತೆ ಬಂದ ನನ್ನ ಗೆಳಯರಾದ ಸಂತೋಷ ಮತ್ತು ಪ್ರಶಾಂತ್‌ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕಳೆದುಕೊಂಡ ಬಂದಿರುತ್ತೆನೆ ಅಷ್ಟೆ. ಅವರಿಗೆ ನನ್ನ ಸಾವಿನ ಬಗ್ಗೆ ಯಾವುದೆ ಸಂಬಂಧ ಇರುವುದಿಲ್ಲ” ಎಂದು ಪತ್ರವನ್ನು ಕೊನೆಗೊಳಿಸಿದ್ದಾರೆ.
ಗುತ್ತಿಗೆದಾರರಾಗಿದ್ದ ಸಂತೋಷ್ ಪಾಟಿಲ್ ಅವರು ಸಚಿವ ಈಶ್ವರಪ್ಪ ಅವರು 40 ಪರ್ಸಂಟೇಜ್ ಕಮೀಷನ್ ಕೇಳಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಈ ವಿವಾದ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಉಂಟು ಮಾಡಿತ್ತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ