ಮಂಗಳೂರು, ಏಪ್ರಿಲ್ 26: ವಿಚಾರಣೆಯ ನೆಪದಲ್ಲಿ ಪೊಲೀಸ್ ಠಾಣೆಗೆ ಕರೆದು ಮೂವರ ಮೇಲೆ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಬಜ್ಪೆ ಠಾಣಾಧಿಕಾರಿ ಸಂದೇಶ್ ಪಿ.ಜಿ. ಹಾಗೂ ಮೂವರು ಪೊಲೀಸರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದೇವಳದ ಅಂಗಡಿಗೆ ವ್ಯಕ್ತಿಯೋರ್ವರು ನೀಡಿರುವ ಸೀಯಾಳದ ಬಗ್ಗೆ ಶ್ರೀರಾಮ ಸೇನೆಯ ಮಹೇಶ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸರು ಮಹೇಶ್‌ರನ್ನು ಠಾಣೆಗೆ ವಿಚಾರಣೆಗೆಂದು ಕರೆಸಿದ್ದರು.
.ಈ ವಿಚಾರ ತಿಳಿದು ದಿನೇಶ್ ಹಾಗೂ ದುರ್ಗಾಚರಣ್ ಎಂಬುವರು ಪೊಲೀಸ್ ಠಾಣೆಗೆ ಬಂದು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಈ ಮೂವರ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮಹೇಶ್ ಹಾಗೂ ದಿನೇಶ್ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ದುರ್ಗಾಚರಣ್ ಕಟೀಲು ಸಂಜೀವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಪ್ರಕರಣವನ್ನು ಎಸಿಪಿ ಮಹೇಶ್ ಕುಮಾರ್ ತನಿಖೆ ನಡೆಸಿದ್ದು, ಠಾಣೆಯಲ್ಲಿ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಉಳಿದ ಇಲಾಖಾ ಶಿಸ್ತುಕ್ರಮ ಹಾಗೂ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ಬಜ್ಪೆ ಪೊಲೀಸ್ ಠಾಣಾಧಿಕಾರಿ ಸಂದೇಶ್ ಪಿ.ಜಿ. ಹಾಗೂ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
ಹೊರಗಿನವರು ನೀಡಿದ ಸೂಚನೆಯ ಮೇರೆಗೆ ಕಟೀಲು ದೇವಸ್ಥಾನದ ಅಂಗಡಿಗೆ ಮುಸ್ಲಿಂ ವ್ಯಕ್ತಿ ಸೀಯಾಳ ಹಾಕಿದನ್ನು ಸ್ಥಳೀಯ ಶ್ರೀರಾಮ ಸೇನೆ ಮುಖಂಡ ಮಹೇಶ್ ಪ್ರಶ್ನೆ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಮುಸ್ಲಿಂ ವ್ಯಕ್ತಿ ಮಹೇಶ್ ಅವರ ವಿರುದ್ಧ ಬಜ್ಪೆ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಬಜ್ಪೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂದೇಶ್ ಪಿ.ಜಿ, ಠಾಣೆಯ ಸಿಬ್ಬಂದಿಗಳಾದ ಸೈಯದ್ ಇಮ್ತೀಯಾಜ್, ಪ್ರವೀಣ್ ಮತ್ತು ಸುನೀಲ್ ಎಂಬುವವರು ಶ್ರೀರಾಮ ಸೇನೆ ಮುಖಂಡ ಮಹೇಶ್‌ರನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ.
ಮಹೇಶ್‌ರನ್ನು ಠಾಣೆಗೆ ಕರೆದೊಯ್ದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರಾದ ದಿನೇಶ್ ಮತ್ತು ದುರ್ಗಾಚರಣ್ ಕೂಡಾ ಠಾಣೆಗೆ ಹೋಗಿದ್ದರು. ಈ ವೇಳೆ ಮೂವರಿಗೂ ಠಾಣಾಧಿಕಾರಿ ಸಂದೇಶ್ ಸೇರಿದಂತೆ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ ಅಂತಾ ಆರೋಪಿಸಲಾಗಿದೆ.
ಪೊಲೀಸ್ ದೌರ್ಜನ್ಯದ ವಿರುದ್ಧ ಹಿಂದೂ ಸಂಘಟನೆಗಳು ರವಿವಾರ ಬಜ್ಪೆ ಪೊಲೀಸ್ ಠಾಣಾ ಮುಂಭಾಗ ಬೃಹತ್ ಪ್ರತಿಭಟನೆ ಮಾಡಿದ್ದವು. ದೌರ್ಜನ್ಯ ಎಸಗಿದ ಎಸ್‌ಐ ಸೇರಿದಂತೆ ಮೂವರು ಪೊಲೀಸರ ವಿರುದ್ಧ ಮೂರು ದಿನದೊಳಗೆ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಯ ಪ್ರಮುಖರು ಆಗ್ರಹಿಸಿದ್ದರು.
ಗಾಯಾಳುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ಪ್ರಮುಖರು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದರು. ಲಾಠಿಯಲ್ಲಿ ಗಾಯಾಳುಗಳ ಪಾದದಡಿ, ಕಾಲಿನ ಕೆಲಭಾಗಗಳಿಗೆ ಹೊಡೆದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು ಎಸ್‌ಐ ವಿರುದ್ಧ ಕ್ರಮಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ದೂರನ್ನಿತ್ತಿದ್ದರು
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ