Slider


ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ:-ಎಬಿವಿಪಿ ಹೆಸರು ಬಳಸಿ ಅಪಪ್ರಚಾರ ಖಂಡನೆ 22-4-2022


 ಮಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವಿಷಯ ಬೆಳಕಿಗೆ ಬಂದಿದ್ದು, ಇದರ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಈ ನೇಮಕಾತಿಯ ಅಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಹೆಸರನ್ನು ಬಳಸಿಕೊಂಡು ಅಪಪ್ರಚಾರವನ್ನು ಮಾಡುತ್ತಿರುವುದು ಖಂಡನಾರ್ಹ ಎಂದು ಎಬಿವಿಪಿ ರಾಜ್ಯ ಘಟಕದ ಕಾರ್ಯದರ್ಶಿ ಮಣಿಕಂಠ ಕಳಸ ಹೇಳಿದ್ದಾರೆ.


ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಲು ಎಬಿವಿಪಿಯ ಹೆಸರನ್ನು ತಳುಕು ಹಾಕುತ್ತಿರುವುದು ಕ್ಷುಲ್ಲಕ ಮನಸ್ಥಿತಿಯ ಪ್ರತೀಕವಾಗಿದೆ. ವಿದ್ಯಾರ್ಥಿ ಪರಿಷತ್‌ನಲ್ಲಿ ಮುಖಂಡ ಎಂಬ ಯಾವುದೇ ಹುದ್ದೆಗಳು ಇಲ್ಲ. ಆದರೂ ಅರುಣ್ ಪಾಟೀಲ ಎಂಬುವವರನ್ನು ವಿದ್ಯಾರ್ಥಿ ಪರಿಷತ್‌ನ ಕಲಬುರ್ಗಿ ಜಿಲ್ಲಾ ಮುಖಂಡ ಎಂದು ಅಪಪ್ರಚಾರವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಅರುಣ್ ಪಾಟೀಲ ವಿದ್ಯಾರ್ಥಿ ಪರಿಷತ್‌ನ ಯಾವುದೇ ಜವಾಬ್ದಾರಿಯಲ್ಲಿ ಇಲ್ಲ. ಪರಿಷತ್‌ನಲ್ಲಿ ವಾರ್ಷಿಕ ಸದಸ್ಯತ್ವ ಮಾತ್ರವಿದ್ದು, ಅದನ್ನು ಹೊರತುಪಡಿಸಿ ಯಾರೂ ಸಂಘಟನೆಯ ಭಾಗವಾಗಿರುವುದಿಲ್ಲ. ಸಂಘಟನೆಯೊಂದಿಗೆ ಯಾವುದೇ ಹೊಣೆಗಾರಿಕೆ ಇಲ್ಲದೇ ಇರುವ ವ್ಯಕ್ತಿಯನ್ನು ಸಂಘಟನೆಯ ಮುಖಂಡ ಎಂಬಂತೆ ಬಿಂಬಿಸಿ, ತನಿಖೆಯ ಹಾದಿ ತಪ್ಪಿಸುವ ಷಡ್ಯಂತ್ರವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.


ವಿದ್ಯಾರ್ಥಿ ಪರಿಷತ್‌ನ ಹೆಸರನ್ನು ಈ ನೇಮಕಾತಿಯ ಅಕ್ರಮ ಪ್ರಕರಣದಲ್ಲಿ ಬಳಸುತ್ತಿರುವುದನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಅಕ್ರಮದ ಬಗ್ಗೆ ಸೂಕ್ತ ತನಿಖೆಯಾಗಬೇಕು. ತಪ್ಪಿತಸ್ಥರು ಯಾರೇ ಇದ್ದರೂ ಅಂಥವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo