ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಇಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶಿವಮೊಗ್ಗದ ಸೋಗಾನೆ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ಇಂದು ವೀಕ್ಷಣೆ ಮಾಡಿದ ಬಳಿಕ ಮುಖ್ಯಮಂತ್ರಿ ಈ ವಿಷಯವನ್ನು ತಿಳಿಸಿದರು.
ಶಿವಮೊಗ್ಗ, ಬಿಜಾಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ, ರಾಯಚೂರಿನಲ್ಲಿ ಈ ವರ್ಷದಿಂದ ಕಾಮಗಾರಿ ಆರಂಭವಾಗುತ್ತದೆ. ಕಾರವಾರದಲ್ಲಿ ನೌಕಾನೆಲೆ ನಿರ್ಮಾಣ ಆಗುತ್ತಿದೆ ಎಂದು ರಾಜ್ಯದಲ್ಲಿನ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.
ಶಿವಮೊಗ್ಗ ವಿಮಾನನಿಲ್ದಾಣ ನಿರ್ಮಾಣ 2006ರಲ್ಲೇ ಆರಂಭಗೊಂಡಿತ್ತು. ಆದರೆ ಕಾಮಗಾರಿ ವಿಳಂಬವಾಯ್ತು ಎಂದ ಅವರು, ಬೆಂಗಳೂರಿನ ನಂತರ ಅತಿಹೆಚ್ಚು ಉದ್ದದ ರನ್ ವೇ ಹೊಂದಿರುವ ಏರ್‌ಪೋರ್ಟ್ ಶಿವಮೊಗ್ಗ ವಿಮಾನನಿಲ್ದಾಣ. ಇದು ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣದ ಸೌಲಭ್ಯ ಹೊಂದಿರಲಿದೆ. ಯಡಿಯೂರಪ್ಪ ಅವರು ಇದರ ಕಾಮಗಾರಿ ವೀಕ್ಷಿಸುವಂತೆ ಸೂಚಿಸಿದ್ದರು. ಅದರಂತೆ ಇಂದು ಕಾಮಗಾರಿ ವೀಕ್ಷಣೆ ಮಾಡಿದ್ದೇನೆ ಎಂದರು.
ಇದು ಕರ್ನಾಟಕದ ಹೆಮ್ಮೆಯ ವಿಮಾನ ನಿಲ್ದಾಣ ಆಗಲಿದೆ. ರೈತರ ಜಮೀನಿಗೆ ಪರಿಹಾರ ಕೊಡಬೇಕಿದೆ. ನೈಟ್ ಲ್ಯಾಂಡಿಂಗ್ ಸೌಲಭ್ಯ ಒದಗಿಸಬೇಕಿದೆ. ಅಲ್ಲದೆ ಕಾಮಗಾರಿಗೆ ಹೆಚ್ಚುವರಿ 50 ಕೋಟಿ ರೂ. ಹಣ ಬೇಕಿದೆ. ಹೆಚ್ಚುವರಿ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಲಿದೆ. ಜೊತೆಗೆ ಈ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ವಿಮಾನ ನಿಲ್ದಾಣ ಅಂತ ಹೆಸರಿಡಲು ಸಂಪುಟ ನಿರ್ಧಾರ ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ