ಉಡುಪಿ : ರಾಷ್ಟದ ಅಭಿವೃದ್ಧಿಯಲ್ಲಿ ಯುವ ಸಮುದಾಯ ಹಾಗೂ ಯುವಕ ಹಾಗೂ ಯುವತಿ ಮಂಡಲಗಳ ಪಾತ್ರ ಬಹು ಮುಖ್ಯವಾಗಿದ್ದು, ವಿವೇಕಾನಂದರ ನುಡಿಯಂತೆ ಯುವ ಜನತೆಯಿಂದ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು.
ಅವರು ಇಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆಡಿಟೋರಿಯಂನಲ್ಲಿ, ನೆಹರು ಯುವ ಕೇಂದ್ರ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೂರ್ಣಪ್ರಜ್ಞ ಕಾಲೇಜು ಉಡುಪಿ, ಪೂರ್ಣಪ್ರಜ್ಞ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಾಗೂ ಉಡುಪಿ ಜಿಲ್ಲೆಯ ಯುವಕ, ಯುವತಿ ಮತ್ತು ಮಹಿಳಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಸಮುದಾಯದಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಉಡುಪಿ ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲಾಡಳಿತ ಕೈಗೊಳ್ಳುವ ಕಾರ್ಯಗಳಿಗೆ ಯುವಜನತೆ ಸದಾಕಾಲ ಉತ್ತಮ ಬೆಂಬಲ ಮತ್ತು ಸಹಕಾರ ನೀಡುತ್ತಿದ್ದು, ಜಿಲ್ಲೆಯ ಯುವಕ ಯುವತಿ ಮಂಡಲಗಳು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಭಟ್ ಮಾತನಾಡಿ, ನೆಹರು ಯುವ ಕೇಂದ್ರದ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪಡೆದ ಹೆಬ್ರಿಯ ಶಾಂತಿನಿಕೇತನ ಯುವ ವೃಂದ, ಕುಡಿಬೈಲು, ಕುಚ್ಚೂರು ಸಂಸ್ಥೆಗೆ 75000 ಸಾವಿರ ರೂ. ನಗದು ಸಹಿತ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕ್ಲೀನ್ ಇಂಡಿಯಾ ಅಭಿಯಾನದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಜಿಲ್ಲೆಯ 3 ಯುವಕ ಸಂಘಗಳಿಗೆ ಪ್ರಶಸ್ತಿ ಪತ್ರ ಮತ್ತು ಆಯ್ದ ಯುವಕ-ಯುವತಿ ಸಂಘಗಳಿಗೆ ಕ್ರೀಡಾ ಸಾಮಗ್ರಿಯನ್ನು ವಿತರಿಸಲಾಯಿತು.
ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವಿನಯ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಪಿವಿ ಭಂಡಾರಿ, ರಾಯನ ಮಥಾಯಿಸ, ಪ್ರಶಾಂತ್ ನೀಲಾವರ, ನಿತ್ಯಾನಂದ ಭಟ್ ಉಪಸ್ಥಿತರಿದ್ದರು.
ನೆಹರು ಯುವ ಕೇಂದ್ರ ಲೆಕ್ಕಾಧಿಕಾರಿ ವಿಷ್ಣುಮೂರ್ತಿ ವಂದಿಸಿ, ಪ್ರಾಧ್ಯಾಪಕ ಆಚಾರ್ಯ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ