ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರೆಂದು ಪ್ರಶ್ನಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ರಘುಪತಿ ಭಟ್ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಶಾಸಕ ರಘುಪತಿ ಭಟ್, ಬಾದಾಮಿ ಶಾಸಕ ಸಿದ್ಧರಾಮಯ್ಯ ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಬೇಕು.
ಶೈಕ್ಷಣಿಕ ವಾತಾವರಣದಲ್ಲಿ ತಮಗೆ ಇಷ್ಟ ಬಂದಂತಿರಲು ಅದೇನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ, ಮಾಡಿದ್ದನ್ನೆಲ್ಲ ಒಪ್ಪಲು ನಾವು ರಾಹುಲ್ ಗಾಂಧಿಯೂ ಅಲ್ಲ. ನಿಯಮಕ್ಕೆ ಬದ್ಧರಾಗುವುದಾದರೆ ಬರಲಿ, ಇಲ್ಲದಿದ್ದರೆ ಮನೆಯಲ್ಲಿರಲಿ. ನಮ್ಮದು ಇದೇ ಸ್ಪಷ್ಟ ನಿಲುವು ಎಂದಿದ್ದಾರೆ.
ಸಿದ್ದರಾಮಯ್ಯ 2013 ರಿಂದ 2018 ರವರೆಗೆ ಸಿಎಂ ಆಗಿದ್ದಾಗಲೂ ಈಗ ವಿವಾದವೆನಿಸಿರುವ ಕಾಲೇಜಿನಲ್ಲಿ ಸಮವಸ್ತ್ರದ ನಿಯಮ ಇತ್ತು. ಯಾರೂ ಕೂಡಾ ಈ ಹಿಂದೆ ಹಿಜಬ್ ನಮ್ಮ ಹಕ್ಕು ಎಂದು ಪ್ರತಿಭಟಿಸಿಲ್ಲ. ಈಗ ಹಿಜಬ್ ಮೂಲಭೂತ ಹಕ್ಕು ಎನ್ನುವ ಸಿದ್ದರಾಮಯ್ಯ ಆಗ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.
ಶಿಕ್ಷಣದಲ್ಲಿ ಮೂಲಭೂತವಾದವನ್ನು ತುರುಕಿಸುವ ಉದ್ಧೇಶದಿಂದ ಸಿದ್ದರಾಮಯ್ಯ ಹಿಜಬ್ ಮೂಲಭೂತ ಹಕ್ಕು ಎಂಬ ವಾದ ಮಂಡಿಸುತ್ತಿದ್ದಾರೆ. ತಾನೊಬ್ಬ ಲಾಯರ್ ಎಂದು ಬೊಗಳೆ ಬಿಡುವವರು ಸಮವಸ್ತ್ರದ ಕುರಿತು ಶಿಕ್ಷಣ ಇಲಾಖೆಯ ನಿಯಮ ಓದಿಲ್ಲವೇಕೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ