ಪ್ರತಿಯೊಬ್ಬರಿಗೂ ತನ್ನಿಚ್ಛೆಯಂತೆ ಉಡುಪು ಧರಿಸುವ ಹಕ್ಕಿದೆ ಆದರೆ ಸಮಯ ಸಂದರ್ಭ ಸ್ಥಳಕ್ಕೆ ಅನುಗುಣವಾಗಿ ಕೆಲವೊಂದು ಬದಲಾವಣೆಗಳು ಅತ್ಯಗತ್ಯ ಅಥವಾ ಅನಿವಾರ್ಯ ಎಂದರೂ ಅದು ಅತಿಶಯೋಕ್ತಿಯೇನಲ್ಲ. ಇಲ್ಲಿ ಚರ್ಚೆ ಆಗಲು ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪಟ್ಟಿಯೇ ಸಾಕಷ್ಟಿದೆ. ಅಂತಹ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರೆ ಆ ವಿದ್ಯಾರ್ಥಿಗಳ ವಿದ್ಯಾರ್ಥಿ ಜೀವನ ಹಸನಾಗುತ್ತಿತ್ತು.ಆದರೆ ಮುಂದಿನ ಭವಿಷ್ಯದ ಕಡೆಗೆ ಚಿಂತೆಮಾಡುವ ಬದಲು ಹಿಜಾಬ್ ವಿವಾದದ ಕಿಡಿ ಹೊತ್ತಿಸಿದ್ದಾರೆ ಆ ಕಿಡಿಯು ಇನ್ನು ಎಲ್ಲಿಗೆ ಹೋಗಿ ತಲುಪುತ್ತದೆಯೋ ತಿಳಿದಿಲ್ಲ.
ವಿದ್ಯಾರ್ಥಿಗಳ ಉದ್ದೇಶ ವಿದ್ಯಾರ್ಜನೆಯೇ ಆದಲ್ಲಿ ಈ ಸಮಸ್ಯೆ ಏಕೆ ಹುಟ್ಟುತ್ತಿತ್ತು? ಸರ್ಕಾರಿ ಕಾಲೇಜಿಗೆ ಸೇರುವಾಗ ಸಮವಸ್ತ್ರದ ನಿಯಮಕ್ಕೆ ಸಹಿ ಹಾಕಿದ ನಿಮಗೆ ಆಗ ಅರಿವಿರಲಿಲ್ಲವೇ ಅಥವಾ ಯಾರಾದರೂ ಬಲವಂತವಾಗಿ ಎಳೆದುಕೊಂಡು ಬಂದು ಕಾಲೇಜಿಗೆ ಸೇರಿಸಿದ್ದರೆ? ಹೋರಾಡಲು ಸಾಕಷ್ಟು ವಿಷಯಗಳಿವೆ ಅದಕ್ಕಾಗಿ ಹೋರಾಡಿ ನಾವು ಧ್ವನಿಗೂಡಿಸುತ್ತೇವೆ. ನಿಮಗೀಗ ಹಿಜಾಬ್ ನಲ್ಲಿ ಬರಲು ಅನುಮತಿ ಸೂಚಿಸಿದರೆ ನಾಳೆ ಎಲ್ಲಾ ವಿದ್ಯಾರ್ಥಿಗಳೂ ತನಗಿಷ್ಟ ಬಂದಂತೆ ಬರಲು ಆರಂಭಿಸುತ್ತಾರೆ.ಇದರಿಂದ ಶೈಕ್ಷಣಿಕ ವಾತಾವರಣ ಹಾಳಾಗುವುದಿಲ್ಲವೇ? ಕೋವಿಡ್ 19 ನ ಅಬ್ಬರ ಒಂದಿಷ್ಟು ಕುಸಿದು ಶಾಲಾ ಕಾಲೇಜುಗಳ ಪುನರಾರಂಭವಾಗಿದೆ ಎಂದು ಮೊಗದಲ್ಲೊಂದು ಮಂದಹಾಸ ಮೂಡಿತ್ತು , ಈಗ ಹಿಜಾಬ್ ವಿವಾದದ ದೈನಂದಿನ ಬೆಳವಣಿಗೆಗಳು ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟುಮಾಡಿರುವುದಂತೂ ಸುಳ್ಳಲ್ಲ.
ನಿಮಗೀಗ ಧರಿಸಿ ಎಂದಿರುವ ಸಮವಸ್ತ್ರ ಅಸಭ್ಯವಾಗೇನಿಲ್ಲ, ಯಾರೂ ನಿಮ್ಮನ್ನು ತುಂಡುಡುಗೆಯುಟ್ಟು ಅಂಗಾಂಗ ಪ್ರದರ್ಶಿಸಿ ಎಂದಿಲ್ಲ! ಮಾಸ್ಕ್ ಧರಿಸುವುದು ಕಡ್ಡಾಯವಾದ್ದರಿಂದ ಮುಖದ ಮುಕ್ಕಾಲು ಭಾಗವನ್ನು ಮಾಸ್ಕ್ ಆವರಿಸಿರುತ್ತದೆ ಇನ್ನೂ ಉಳಿದದ್ದು ತಲೆ ಕೂದಲಷ್ಟೇ! ಈ ತಲೆಕೂದಲು ಕಾಣದಿರಲು ಎಲ್ಲರಿಗೂ ತಲೆನೋವು ಕೊಡಹೊರಟಿರುವುದು ಎಷ್ಟರ ಮಟ್ಟಿಗೆ ಸರಿ? ನಿಮಗೆ ಸಹೋದರಿಯರ ಬಗೆಗೆ ಅಷ್ಟೊಂದು ಕಾಳಜಿ ಇದ್ದರೆ ಚೀನಾದಂತಹ ದೇಶದಲ್ಲಿ ಇಸ್ಲಾಂ ಧರ್ಮದ ಸಹೋದರಿಯರು ಪ್ರತಿನಿತ್ಯ ಅತ್ಯಾಚಾರ ಲೈಂಗಿಕ ಶೋಷಣೆ, ಸಾವು ನೋವುಗಳ ಚಿತ್ರಹಿಂಸೆಯಲ್ಲಿ ಹೆಣಗಾಡುತ್ತಿದ್ದಾರೆ ಇಂತಹ ವಿಕೃತತೆಯ ವಿರುದ್ಧ ದನಿಯೆತ್ತಿ ನಾವೂ ಕೂಡಾ ನಿಮ್ಮೊಂದಿಗೆ ದನಿಯಾಗುತ್ತೇವೆ! ಅವರೂ ಕೂಡ ನಿಮ್ಮ ಧರ್ಮದ ಸಹೋದರಿಯರೇ ಇಲ್ಲಿ ಹಿಜಾಬ್ ಗಾಗಿ ಹೋರಾಡುವ ನಿಮಗೆ ಅಲ್ಲಿ ಕಾಮಾಂಧರ ವಿಕೃತಿಗೆ ಸಾಕ್ಷಿಯಾಗಿ ನಿರ್ವಸ್ತ್ರರಾಗಿರುವ ನಿಮ್ಮದೇ ಧರ್ಮದ ಅದೆಷ್ಟೋ ಸಹೋದರಿಯರ ದಯನೀಯ ಪರಿಸ್ಥಿತಿ ನಿಮಗೆ ಕಾಣುತ್ತಿಲ್ಲವೇ ತಾಕತ್ತಿದ್ದರೆ ಅದಕ್ಕಾಗಿ ಹೋರಾಡಿ.
ಇನ್ನು ಹಲವರು ಹಿಂದೂ ಧರ್ಮದ ಬಗೆಗೆ ಮಾತಾಡಿದ್ದಾರೆ. ನಿಜ ನಮ್ಮ ಧರ್ಮದಲ್ಲಿಯೂ ಹಲವು ಆಚರಣೆಗಳಿವೆ ಕಟ್ಟುಪಾಡುಗಳಿವೆ ಆದರೆ ನಮ್ಮ ಧರ್ಮ ಸಂಕುಚಿತ ಮನಸ್ಥಿತಿಯದ್ದಲ್ಲ ಇಲ್ಲಿ ಕಟ್ಟುಪಾಡುಗಳಿದ್ದರು ಅದನ್ನು ಆಚರಿಸುವ ಆಸಕ್ತಿ ಇಲ್ಲದಿದ್ದರೆ ಯಾರನ್ನೂ ಹಿಂಸಿಸಿ ಬಲವಂತವಾಗಿ ಆಚರಣೆಗಳನ್ನು ಮಾಡು ಎಂದು ಹೇಳುವುದಿಲ್ಲ ನಮ್ಮಲ್ಲಿ ಪ್ರತಿಯೊಬ್ಬರೂ ಸ್ವಾತಂತ್ರರೇ. ನಮ್ಮೀ ಧರ್ಮದ ಚಿಂತನೆ ವಿಶಾಲವಾದದ್ದು ನಮ್ಮ ಪ್ರತೀ ಆಚರಣೆಯು ವೈಜ್ಞಾನಿಕವಾದದ್ದು.
ಹೌದು ಯುವಜನರು ಧರ್ಮಾಚರಣೆಗಳನ್ನು ಮರೆತಿದ್ದಾರೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ ಆದರೆ ಇದರ ಮೂಲ ಏನಿರಬಹುದು? ಏಕೆ ಹೀಗಾಗಿರಬಹುದು? ಎಂದಾದರೂ ಯೋಚಿಸಿದ್ದೀರಾ! ಮತ್ತದೇ ಶಿಕ್ಷಣ ಪದ್ಧತಿ ನಮಗೆ ಉತ್ತರವಾಗಿ ದೊರೆಯುತ್ತದೆ.ನಮ್ಮ ಸಂಸ್ಕೃತಿಯ ಮೂಲವನ್ನು ಅರಿಯದ ಹೊರೆತು ಆ ಆಚರಣೆಗಳ ವೈಜ್ಞಾನಿಕ ಉಪಯೋಗ ಅರಿಯಲು ಸಾಧ್ಯವಿಲ್ಲ.ನಮ್ಮ ಪೂರ್ವಿಕರ ಕೊಡುಗೆಯಾದ "ಯೋಗ"ವನ್ನು ಮರೆತು ನಾವು ಪಾಶ್ಚಾತ್ಯ ವ್ಯಾಯಾಮದ ಮೊರೆ ಹೋಗಿದ್ದೇವೆ ಆದರೆ ಅವರು ಅದರ ವೈಜ್ಞಾನಿಕ ಉಪಯೋಗದ ಅರಿವು ಪಡೆದು ಯೋಗದ ಅಭ್ಯಾಸಕ್ಕಾಗಿಯೇ ಭಾರತದತ್ತ ಮುಖಮಾಡುತ್ತಿದ್ದಾರೆ. ನಮ್ಮ ಪೂರ್ವಜರು ವೈಜ್ಞಾನಿಕ ಕಾರಣವಿಲ್ಲದೇ ಯಾವ ಆಚರಣೆಯನ್ನು ತಂದಿಲ್ಲ.ಆದರೆ ಅದರ ಬೆಲೆ ನಮಗೆ ತಿಳಿಯಬೇಕಾದರೆ ಮತ್ತೆ ಪಾಶ್ಚಾತ್ಯರಿಗೆ ಹಣ ನೀಡಿ ನಮಗೂ ಕಲಿಸಿ ಎಂದೂ ಕೈಚಾಚುವ ಸಂದರ್ಭ ಬರಬೇಕೆನೋ!
✒️-ದಿವ್ಯಜ್ಯೋತಿ ಕುಂದಾಪುರ(ಹವ್ಯಾಸಿ ಬರಹಗಾರರು)
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ