ದಕ್ಷಿಣ.ಕನ್ನಡ ಜಿಲ್ಲೆಯಲ್ಲಿ ಈ ವಾರಾಂತ್ಯ ಕರ್ಫ್ಯೂನಲ್ಲಿ ಕೌಟುಂಬಿಕ ಕಾರ್ಯಕ್ರಮಗಳು ಹಾಗೂ ಮದುವೆ ಸೇರಿದಂತೆ ಪೂರ್ವನಿಗದಿತ ಕಾರ್ಯಕ್ರಮಗಳನ್ನು ನಡೆಸಲು ಮಾತ್ರ ಅವಕಾಶವಿದೆ.
ಮದುವೆ ಹೊರತುಪಡಿಸಿ 100 ಜನರ ಮಿತಿಗೊಳ್ಳಪಟ್ಟು ನಡೆಸಬಹುದಾಗಿದೆ. ಮದುವೆಗೆ ಒಳಾಂಗಣದಲ್ಲಿ 100 ಹಾಗೂ ಹೋರಾಂಗಣದಲ್ಲಿ 200 ಮಂದಿಗೆ ಅವಕಾಶ ನೀಡಲಾಗಿದೆ.
ಹರಕೆ ಯಕ್ಷಗಾನವನ್ನು 100 ಜನರಿಗೆ ಸೀಮಿತಗೊಳಿಸಿ ಕೌಟುಂಬಿಕ ಕಾರ್ಯಕ್ರಮವಾಗಿ ನಡೆಸಬಹುದು. ಇತರ ಯಾವುದೇ ಕಾರ್ಯಕ್ರಮಗಳಿಗೆ ರಿಯಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ. ಅವರು ತಿಳಿಸಿದ್ದಾರೆ.
ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಪ್ರಾಣಿಗಳ ಮೇವು ವ್ಯವಹಾರ ಅಂಗಡಿಗಳು, ಸಾರ್ವಜನಿಕ ವಿತರಣ ವ್ಯವಸ್ಥೆಯ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗಳಿಗೆ ಮಾತ್ರ ಅವಕಾಶವಿದೆ.
ಎಲ್ಲಾ ಸಾರ್ವಜನಿಕ ಉದ್ಯಾನವನಗಳನ್ನು ಮುಚ್ಚಲಾಗುತ್ತಿದೆ.
ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ಇತ್ಯಾದಿ, ತುರ್ತು ಪರಿಸ್ಥಿತಿಯಲ್ಲಿ ವ್ಯವಹರಿಸಲು ಅವಕಾಶವಿರುತ್ತದೆ.
ಅಗತ್ಯ ಸೇವೆಗಳು ಮತ್ತು ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣ ಕರ್ತವ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ.
ಐಟಿ ಕೈಗಾರಿಕೆಗಳು ಸೇರಿದಂತೆ ಎಲ್ಲ ಕೈಗಾರಿಕೆಗಳಿಗೆ ಕರ್ಫ್ಯೂ ನಿರ್ಬಂಧದಿಂದ ವಿನಾಯಿತಿ ನೀಡಿದೆ ಮತ್ತು ಅಂತಹ ಸಂಸ್ಥೆಗಳ ನೌಕರರ ಸಂಚಾರಕ್ಕೆ, ಅವರ ಸಂಬಂಧಪಟ್ಟ ಸಂಸ್ಥೆ/ಕಂಪೆನಿಯು ನೀಡಿದ ಅಧಿಕೃತ ಗುರುತಿನ ಚೀಟಿ ಹೊಂದಿಕೊಂಡು ಪ್ರಯಾಣಿಸಲು ಅನುಮತಿಸಲಾಗಿದೆ.
ರೋಗಿಗಳು ಮತ್ತು ಅವರ ಪರಿಚಾರಕರು/ತುರ್ತು ಅಗತ್ಯತೆಯ ಆವಶ್ಯಕತೆವಿರುವ ವ್ಯಕ್ತಿಗಳು, ಲಸಿಕೆಯನ್ನು ತೆಗೆದುಕೊಳ್ಳಲು ಉದ್ದೇಶಿಸಿರುವ ಅರ್ಹ ವ್ಯಕ್ತಿಗಳು ಸೂಕ್ತ ದಾಖಲೆಗಳೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.
ಬಸ್, ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿ ಸಿಟಿ ಬಸ್, ಸರ್ವಿಸ್ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್ ಟರ್ಮಿನಲ್, ಬಸ್ ನಿಲ್ದಾಣಗಳು ಮತ್ತು ರೈಲ್ವೇ ನಿಲ್ದಾಣಗಳಿಗೆ ಹೋಗಿ ಬರುವುದಕ್ಕೆ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಕರ್ಫ್ಯೂ ನಿಮಿತ್ತ ಜಾರಿಗೊಳಿಸಿದ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣ ಕಾಯ್ದೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮದಂತೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಶಾಲೆ ಲಾಕ್ ಸದ್ಯಕ್ಕಿಲ್ಲ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಮಂಗಳೂರು, ದಕ್ಷಿಣ.ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾದಿಂದ ಮಕ್ಕಳಲ್ಲಿ ಸಮಸ್ಯೆ ಕಂಡುಬಂದಿಲ್ಲ ; ಹಾಗಾಗಿ ಶಾಲೆಯನ್ನು ಲಾಕ್‌ಡೌನ್ ಮಾಡುವ ಸಾಧ್ಯತೆ ಕಡಿಮೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದರೆ ಹಾಗೂ ಅವರ ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದರೆ ಮಾತ್ರವೇ ಲಾಕ್ ಮಾಡಬಹುದು ; ಈಗ ಅಂತಹ ಪರಿಸ್ಥಿತಿ ಇಲ್ಲ ಎಂದವರು ವಿವರಿಸಿದರು.
ಮೊಲ್ನುಪಿರವಿರ್ (MOLNUPIRAVIR) ಎಂಬ ಆಯಂಟಿ ವೈರಲ್ ಡ್ರಗ್ ಬಂದಿದ್ದು, ಅದು ಕೊರೊನಾಕ್ಕೆ ಪರಿಣಾಮಕಾರಿ ಎನ್ನಲಾಗುತ್ತಿದೆ. ಹಾಗಾಗಿ ಅದನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿ.ಎಚ್.ಒ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ