ಮೈಸೂರು:-ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸುಮಾರು 18 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ರಾಜ್ಯ ಸರ್ಕಾರದಿಂದಲೂ 5 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲೆ ವಿತರಿಸಲಾಗುವುದು ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಹೇಳಿದರು.
ಸೋಮವಾರ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ 5 ಲಕ್ಷ ಮನೆಗಳಿಗೆ ರಾಜ್ಯ ಸರ್ಕಾರದಿಂದಲೇ ಮಂಜೂರಾತಿ ಮಾಡಿ 4 ಲಕ್ಷ ಮನೆಗಳನ್ನು ಗ್ರಾಮೀಣ ಭಾಗಕ್ಕೆ ಹಾಗೂ 1 ಲಕ್ಷ ಮನೆಗಳನ್ನು ನಗರ ಪ್ರದೇಶಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಕಾರ್ಯಾದೇಶವಾದ ಮೇಲೆ ಹಾಗೂ ಫೌಂಡೇಷನ್ ಹಾಕಿದ ನಂತರ ಹಣ ನೀಡಲಾಗುತ್ತಿತ್ತು. ಆದರೆ ಅಂತಹ ನಿರ್ದಾರಗಳನ್ನು ಬದಲಿಸಿ 10 ತಿಂಗಳಲ್ಲಿ ಮನೆಗಳನ್ನು ಮುಗಿಸಲು 3 ಕಂತುಗಳನ್ನಾಗಿ ಮಾಡಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮೆ ಮಾಡಲಾಗುವುದು ಎಂದು ಹೇಳಿದರು.
ಕಳೆದ ಸರ್ಕಾರ ಮಾಡಿದ ಲೋಪದೋಷಗಳಿಂದಾಗಿ ಕೇಂದ್ರ ಸರ್ಕಾರವು ಒಂದು ಮನೆಯನ್ನೂ ಸಹ ನೀಡಲಾಗಲಿಲ್ಲ. ಕೇಂದ್ರಸರ್ಕಾರಕ್ಕೆ ಇದರ ಬಗ್ಗೆ ಮನವರಿಕೆಯಾದ ಪರಿಣಾಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಎಲ್ಲಾರಾಜ್ಯದ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿದ ನಂತರ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಕೈಗೆತ್ತಿಕೊಂಡರು. ಈ ಹಿನ್ನೆಲೆಯಲ್ಲಿ 18 ಲಕ್ಷಮನೆಗಳನ್ನು ನಿರ್ಮಾಣ ಮಾಡುವುದರ ಜೊತೆಗೆ, ನಿವೇಶನಗಳನ್ನು ಖರೀದಿಸಲು ಅನುಮತಿ ನೀಡಿದ್ದಾರೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿದಂತೆ ಇತರರು ಹಾಜರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ