ವಿಶ್ವ ಕೊಂಕಣಿ ಸರ್ದಾರ್ ಎಂದು ಜನಪ್ರಿಯರಾಗಿದ್ದ, ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರಾಗಿದ್ದ ಬಸ್ತಿ ವಾಮನ್ ಮಾಧವ್ ಶೆಣೈ ಇಹಲೋಕ ತ್ಯಜಿಸಿದ್ದಾರೆ.
ಬಸ್ತಿ ವಾಮನ ಶೆಣೈ 1943ರ ನವೆಂಬರ್ 6ರಂದು ಬಂಟ್ವಾಳದಲ್ಲಿ ಜನಿಸಿದರು. ಮಂಗಳೂರಿನ ಶಕ್ತಿನಗರದಲ್ಲಿ ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಉಳಿವು ಮತ್ತು ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿ ಗಮನ ಸೆಳೆದಿದ್ದರು.
ಬಸ್ತಿ ವಾಮನ್ ಶೆಣೈ ಅವರು 1954 ಮತ್ತು 1962 ರ ನಡುವೆ ಬಂಟ್ವಾಳದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ಟ್ರೇಡ್ ಯೂನಿಯನ್ ವಿಭಾಗ INTUC ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಅವಧಿಯಲ್ಲಿ ಅವರು ಟಿ. ಎ. ಪೈ ಅವರಿಂದ ಪ್ರಭಾವಿತರಾಗಿದ್ದರು. ಬಸ್ತಿ ವಾಮನ್ ಶೆಣೈ ಅವರು 1958 ರಲ್ಲಿ ಸರಸ್ವತಿ ಕಲಾ ಪ್ರಸಾರಕ ಸಂಘ ಮತ್ತು ಸರಸ್ವತಿ ಸಂಗೀತ ಶಾಲೆ ಬಂಟ್ವಾಳವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯಶವಂತ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯರಾಗಿದ್ದರು. ಬಂಟ್ವಾಳದಲ್ಲಿ ಹಬ್ಬ ಹರಿದಿನಗಳಲ್ಲಿ ಕೊಂಕಣಿ ನಾಟಕ ಹಾಗೂ ರಂಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.
ಮೃತರು ಇಬ್ಬರು ಪುತ್ರರು, ಓರ್ವೆ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ