ಉಡುಪಿ, ಡಿಸೆಂಬರ್ 29 ರಾಷ್ಟಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ನಿತ್ಯ ಸತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ರಾಷ್ಟಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ, ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವ ಮಾನವವಾಗಿರುತ್ತದೆ. ಬೆಳೆಯುತ್ತಾ ಹೋದಂತೆ ಜಾತಿ, ಅಂತಸ್ತು ಮುಂತಾದ ಭೇಧ-ಭಾವಗಳ ಮೂಲಕ ಅವನನ್ನು ನಾವು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಅದರೆ ಅವನನ್ನು ವಿಶ್ವ ಮಾನವನನ್ನಾಗಿಯೇ ಇರಲು ಬಿಡಬೇಕು ಎಂಬುದು ಕುವೆಂಪು ಅವರ ವಿಶ್ವ ಮಾನವ ಸಂದೇಶ. ಯಾವುದೇ ಭೇಧ-ಭಾವ ತೋರದೇ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವ ಮೂಲಕ ವಿದ್ಯೆಯಿಂದ ಅಲ್ಪ ಮಾನವನನ್ನು ವಿಶ್ವ ಮಾನವರನ್ನಾಗಿ ಮಾಡಲು ಸಾಧ್ಯವಿದ್ದು, ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಪ್ರತಿ ನಿತ್ಯ ಕುವೆಂವು ಅವರ ಸಂದೇಶಗಳು ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕೋವಿಡ್-19 ರ ಈ ಅವಧಿಯಲ್ಲಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಅತ್ಯಂತ ಪ್ರಸ್ತುತವಾಗಿದ್ದು, ವಿಶ್ವದ ಯಾವುದೋ ಮೂಲೆಯಲ್ಲಿ ಕೋವಿಡ್-19 ಉಲ್ಬಣಗೊಂಡಿದೆ ಎಂದು ನಾವು ಇಲ್ಲಿ ಕೋವಿಡ್ ನಿಯಮಗಳ ಪಾಲನೆ ಮಾಡದೇ ಇರಬಾರದು. ಪ್ರತಿಯೊಬ್ಬರೂ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸುವುದರ ಮೂಲಕ ಇಡೀ ವಿಶ್ವದಿಂದ ಕೋವಿಡ್-19 ನಿರ್ಮೂಲನೆಗೊಳಿಸಲು ಹೋರಾಡಿದಲ್ಲಿ ವಿಜಯ ಸಾಧ್ಯವಾಗಲಿದೆ. ಕುವೆಂಪು ಅವರ ಜೀವನ ಮತ್ತು ಸಂದೇಶ ಎಲ್ಲರಿಗೂ ಸದಾ ದಾರಿ ದೀಪವಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಕುವೆಂಪು ಕುರಿತು ವಿಶೇಷ ಉಪನ್ಯಾಸ ನೀಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕುವೆಂಪು ಅವರು 20 ನೇ ಶತಮಾನದ ದೈತ್ಯ ಪ್ರತಿಭೆ. ಅವರ ವಿಶ್ವ ಮಾನವ ಪ್ರಜ್ಞೆ ಎಲ್ಲೆಡೆ ಮೂಡಬೇಕು. ಜಿಲ್ಲಾ ಕ.ಸಾ.ಪ ವತಿಯಿಂದ ಕುವೆಂಪು ಕುರಿತು ಕಿರು ಪುಸ್ತಕಗಳನ್ನು ಮುದ್ರಿಸಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ವಿತರಿಸುವ ಯೋಜನೆಯಿದ್ದು, ಜಿಲ್ಲೆಯಲ್ಲಿ ಹೆಸರಿಡದ ಅನೇಕ ರಸ್ತೆಗಳಿದ್ದು, ಅವುಗಳಿಗೆ ಸ್ವಾತಂತ್ರö್ಯ ಹೋರಾಟಗಾರರ ಮತ್ತು ಪ್ರಸಿದ್ಧ ಕವಿಗಳ ಹೆಸರುಗಳನ್ನು ಇಡಬೇಕು. ಪ್ರತೀ ಮನೆಯಲ್ಲೂ ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಬೇಕು. ಕುವೆಂಪು ಶತಮಾನೋತ್ಸವ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಕುವೆಂಪು ಅವರ ದಿನಚರಿ ನೆನಪಿನ ದೋಣಿಯಲ್ಲಿ ಕೃತಿಯನ್ನು ಪ್ರತಿಯೊಬ್ಬರೂ ಓದುವುದರ ಮೂಲಕ ಅವರ ಜೀವನವನ್ನು ಅರಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಲಾವತಿ ದಯಾನಂದ್ ಅವರಿಂದ ಕುವೆಂಪು ಅವರ ಗೀತ ಗಾಯನ ಕಾರ್ಯಕ್ರಮ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ