ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಉಡುಪಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗದ ಅತಿಥಿ ಉಪನ್ಯಾಸಕ ಶ್ರೀಹರ್ಷ ಶ್ಯಾನುಭೋಗ್(38) ಆತ್ಮಹತ್ಯೆಗೆ ಶರಣಾದವರು. ಅವರು ಉಡುಪಿಯ ಎಂಜಿಎಂ ಕಾಲೇಜಿನ ಸಿಬ್ಬಂದಿ ವಸತಿ ಗೃಹದಲ್ಲಿ ಗುರುವಾರ ಮುಂಜಾನೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಶಿಲ್ಪಾ ಶ್ಯಾನುಭೋಗ್ ಅವರೂ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಕಳೆದ 13 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿದ್ದ ಶ್ರೀಹರ್ಷ ತಮ್ಮ ಸೇವೆ ಕಾಯಂ ಆಗದ ಹಿನ್ನೆಲೆಯಲ್ಲಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆತಂಕಕ್ಕೆ ಒಳಗಾಗಿದ್ದ ಅವರು ಆತ್ಮೀಯರೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದರು ಎಂದು ತಿಳಿದುಬಂದಿದೆ
ಅಲ್ಲದೇ ಕಳೆದ ಮೂರು ತಿಂಗಳಿನಿಂದ ಮಾನಸಿಕವಾಗಿ ಕುಗ್ಗಿದ್ದ ಅವರು ಇದಕ್ಕಾಗಿಯೇ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಸಹ ಪಡೆಯುತ್ತಿದ್ದರು. ಇವರು ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶ್ರೀ ಹರ್ಷ ಶ್ಯಾನುಬೋಗ್ ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳ ಮೆಚ್ಚಿನ ಉಪನ್ಯಾಸಕರಾಗಿದ್ದ ಹರ್ಷ ಶ್ಯಾನುಬೋಗ್ ಸಹೋದ್ಯೋಗಿಗಳೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಸಂಜೆ ಹೊಸನಗರ ತಾಲೂಕಿನ ಯಡೂರಿನಲ್ಲಿ ಜರುಗಿತು ಎಂಬ ಮಾಹಿತಿ ಲಭ್ಯವಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ