Slider

ಮಹಿಳಾ ಶಕ್ತಿ ಮೂಲಕ ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯ: ಶಾಸಕ ಲಾಲಾಜಿ ಮೆಂಡನ್18-12-2021

 ಉಡುಪಿ, :- ಮಹಿಳೆಯರಿಗೆ ತ್ಯಾಜ್ಯ ವಿಲೇವಾರಿ ಕುರಿತಂತೆ ಜಾಗೃತಿ ಮೂಡಿಸಿದ್ದಲ್ಲಿ, ಅವರು ತಮ್ಮ ತಮ್ಮ ಮನೆಗಳಲ್ಲಿನ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ, ಇಡೀ ಗ್ರಾಮವನ್ನು ಸ್ವಚ್ಛ ಗ್ರಾಮವಾಗಿ ರೂಪುಗೊಳ್ಳಲು ಇತರರಿಗೂ ಪ್ರೇರೇಪಣೆ ನೀಡಲಿದ್ದಾರೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.

 ಅವರು ಇಂದು ಕೊಡಿಬೆಟ್ಟು ಗ್ರಾಮ ಪಂಚಾಯತ್ನಲ್ಲಿ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ), ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಕೊಡಿಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ನಡೆದ “ಕೊಳಚೆ ಮುಕ್ತ ಗ್ರಾಮದಡೆ ಮಹಿಳಾ ಶಕ್ತಿ ನಡೆ” ದ್ರವ ತ್ಯಾಜ್ಯ ನಿರ್ವಹಣೆ ಮಾದರಿ ಗ್ರಾಮ ನಿರ್ಮಾಣದ ವಿಶೇಷ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅದು ದೊಡ್ಡ ಸಮಸ್ಯೆಯಾಗಲಿದ್ದು, ಇದರಿಂದ ಪರಿಸರಕ್ಕೆ ಸಹ ಹಾನಿಯಾಗಲಿದೆ. ನೈರ್ಮಲ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಜಿಲ್ಲೆಯಲ್ಲಿ ಈಗಾಗಲೇ ಒಣಕಸ ಸಂಗ್ರಹ ಉತ್ತಮವಾಗಿ ನಡೆಯುತ್ತಿದ್ದು, ಮನೆಯಲ್ಲಿ ಸಂಗ್ರಹವಾಗುವ ದ್ರವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಇದು ಜಲ ಮೂಲಗಳನ್ನು ಕಲುಷಿತಗೊಳಿಸಲಿದ್ದು, ವಿವಿಧ ರೋಗಗಳ ಹರಡುವಿಕೆಗೆ ಕಾರಣವಾಗಲಿದೆ. ಗ್ರಾಮದ ಪ್ರತೀ ಮಹಿಳೆಯರಿಗೆ ದ್ರವ ತ್ಯಾಜ್ಯ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳೆಯರು ಜಾಗೃತವಾದಲ್ಲಿ ಸಮರ್ಪಕ ರೀತಿಯಲ್ಲಿ ಇದರ ವಿಲೇವಾರಿ ಸಾಧ್ಯವಾಗಲಿದ್ದು, ಜಿಲ್ಲೆಯಲ್ಲಿ ಮಹಿಳಾ ಶಕ್ತಿಯ ಮೂಲಕ ಕೊಳಚೆ ಮುಕ್ತ ಗ್ರಾಮಗಳು ನಿರ್ಮಾಣಗೊಳ್ಳಲು ಸಾಧ್ಯವಾಗಲಿದೆ ಎಂದು ಲಾಲಾಜಿ ಮೆಂಡನ್ ಹೇಳಿದರು.

  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಜಿಲ್ಲೆಯ 7 ಗ್ರಾಮ ಪಂಚಾಯತ್ಗಳಲ್ಲಿ ಆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳ ಸಹಕಾರದೊಂದಿಗೆ, ಕೊಳಚೆ ನೀರಿನ ಸಮರ್ಪಕ ನಿರ್ವಹಣೆ ಕುರಿತಂತೆ ಪ್ರಾಯೋಗಿಕವಾಗಿ ಅಭಿಯಾನ ಆರಂಭಿಸಿದ್ದು, ಒಂದು ತಿಂಗಳಿನ ಒಳಗೆ ಈ ಗ್ರಾಮಗಳನ್ನು ಕೊಳಚೆ ಮುಕ್ತ ಗ್ರಾಮಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಕೊಳಚೆ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಲಿದೆ ಹಾಗೂ ಜಲ ಮೂಲಗಳನ್ನು ಸೇರುವುದರಿಂದ, ಕುಡಿಯುವ ನೀರು ಕಲುಷಿತಗೊಂಡು ವಿವಿಧ ರೋಗಗಳು ಬರಲಿವೆ. ಕೊಳಚೆ ನೀರನ್ನು ಸೋಕ್ ಪಿಟ್ಗೆ ಅಥವಾ ಕಿಚನ್ ಗಾರ್ಡನ್ಗೆ ಬಳಸಬಹುದಾಗಿದ್ದು, ಸೋಕ್ ಪಿಟ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿಯಲ್ಲಿ 14000 ರೂ. ಸಹಾಯ ಧನ ನೀಡಲಾಗುವುದು. ಜಿಲ್ಲೆಯ  ಎಲ್ಲಾ ಗ್ರಾಮ ಪಂಚಾಯತ್ಗಳನ್ನು ಕೊಳಚೆ ಮುಕ್ತ ಗ್ರಾಮಗಳನ್ನಾಗಿ ಮಾಡಲು ಪಂಚಾಯತ್ಗಳು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದರು. 

  ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.

  ಕಾರ್ಯಕ್ರಮದಲ್ಲಿ ಕೊಳಚೆ ಮುಕ್ತ ಗ್ರಾಮ ಕುರಿತು ಜಾಗೃತಿ ಮೂಡಿಸುವ ಸ್ಟಿಕ್ಕರ್ ಬಿಡುಗಡೆ ಹಾಗೂ ಸ್ವಚ್ಛತೆ ಕುರಿತು ಏರ್ಪಡಿಸಿದ್ದ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

 ಕೊಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಶೆಟ್ಟಿ, ಉಪಾಧ್ಯಕ್ಷ ಸದಾನಂದ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಪಿಡಿಓ ರೇವತಿ ಸ್ವಾಗತಿಸಿದರು.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo