ಸುಬ್ರಹ್ಮಣ್ಯ: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಪಂಚಮಿಯ ದಿನವಾದ ಬುಧವಾರ ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನೆರವೇರಲಿದೆ. ಮಧ್ಯಾಹ್ನ ಪಲ್ಲ ಪೂಜೆ ನಡೆಯಲಿದೆ. ರಾತ್ರಿ ವಿಶೇಷ ಪಲ್ಲಕ್ಕಿ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ಜರುಗಲಿದೆ.
ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ ಕುಕ್ಕೆ ಬೆಡಿ ಪ್ರದರ್ಶಿತವಾಗಲಿದೆ. ಭಕ್ತಾದಿಗಳಿಗೆ ಮಧ್ಯಾಹ್ನ ಪ್ರಸಾದ ಮಾತ್ರವಲ್ಲದೆ ಆದಿ ಸುಬ್ರಹ್ಮಣ್ಯ ದೇವಳದ ಬಳಿ ವಿಶೇಷ ಭೋಜನ ಶಾಲೆಯಲ್ಲಿ ಭೋಜನ ಪ್ರಸಾದವನ್ನು ವಿತರಿಸಲಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಚೌತಿಯ ದಿನವಾದ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಹೂವಿನ ತೇರಿನ ಉತ್ಸವ ನಡೆಯಿತು.
ಶ್ರೀ ದೇವರ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಹಾಗೂ ಪಾಲಕಿ ಉತ್ಸವ ನೆರವೇರಿತು. ಉತ್ತರಾಧಿ ಮಠದಲ್ಲಿ ಬ್ರಹ್ಮರಥಕ್ಕೆ ಶಿಖರ ಮುಹೂರ್ತ ನಡೆಯಿತು. ಪುರೋಹಿತ ಮಧುಸೂದನ ಕಲ್ಲೂರಾಯ ಪೂಜಾ ಕಾರ್ಯ ನೆರವೇರಿಸಿದರು.
ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನಡೆದ ಬಳಿಕ ಸುಬ್ರಹ್ಮಣ್ಯ ದೇವರ ಹೂವಿನ ತೇರಿನಲ್ಲಿ ದೇವರು , ಸಹೋದರ ಕಾಶಿಕಟ್ಟೆ ಮಹಾಗಣಪತಿಯ ಸನ್ನಿಧಿಗೆ ಆಗಮಿಸಿ ಸೋದರರ ಸಮಾಗಮ ನೆರವೇರಿತು. ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು .
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಮಹೋತ್ಸವದ ಪ್ರಯುಕ್ತ ಪಂಚಮಿ ದಿನ ಮಂಗಳವಾರ ಪಂಚಮಿ ರಥ ಮತ್ತು ಬ್ರಹ್ಮರಥ ಶಿಖರ ಮುಹೂರ್ತ ನಡೆಯಿತು. ಪುರೋಹಿತ ಮಧುಸೂಧನ ಕಲ್ಲೂರಾಯ ಪುಜಾ ಕಾರ್ಯ ನೆರವೇರಿಸಿದರು. ಬಳಿಕ ಮಲೆಕುಡಿಯ ಸಮುದಾಯದವರು ಅದನ್ನು ಪಂಚಮಿ ರಥ ಹಾಗೂ ಬ್ರಹ್ಮರಥಗಳಿಗೆ ಅಳವಡಿಸಿದರು .
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್, ಸದಸ್ಯರಾದ ಶ್ರೀವತ್ಸಾ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ , ಶಿಷ್ಟಾಚಾರ ವಿಭಾಗದ ಗೋಪಿನಾಥ್ ನಂಬೀಶ್ , ರಾಜೇಶ್ ಎನ್.ಎಸ್ ,ಮಲೆಕುಡಿಯ ಜನಾಂಗದ ಗುರಿಕಾರರು ಉಪಸ್ಥಿತರಿದ್ದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ