ಮಂಗಳೂರು ವಿಶ್ವವಿದ್ಯಾಲಯದ ಪ್ರಮಾದಕ್ಕೆ ಹೊಣೆಯಾರು..? ತಮ್ಮದಲ್ಲದ ತಪ್ಪಿಗೆ ನಮಗೇಕೆ ಶಿಕ್ಷೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು..?
ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳನ್ನು ನಡೆಸುವಲ್ಲಿ ಮಾಡಿದ ಯಡವಟ್ಟಿನ ಸರಮಾಲೆ ಇದೀಗ ಫಲಿತಾಂಶದವರೆಗೂ ಮುಂದುವರಿದಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನೇ ನೀಡದೆ ಪರೀಕ್ಷೆ ನಡೆಸಿದ್ದ ವಿವಿ ಇದೀಗ ಫಲಿತಾಂಶದಲ್ಲೂ ತನ್ನ ಬೇಜವಾಬ್ದಾರಿ ನಡೆಯನ್ನು ಮುಂದುವರೆಸಿದೆ. ಮೊದಲು ನವೆಂಬರ್ 23ನೇ ತಾರೀಕಿಗೆ ಪದವಿ ಫಲಿತಾಂಶ ಪ್ರಕಟಿಸುತ್ತೇವೆ ಎಂದು ಘೋಷಿಸಿದ್ದ ವಿವಿ ತಾಂತ್ರಿಕ ಕಾರಣದ ನೆಪವೊಡ್ಡಿ ನವೆಂಬರ್ 29ಕ್ಕೆ ಫಲಿತಾಂಶವನ್ನು ಮುಂದೂಡಿತ್ತು, ನಂತರ 29 ನೇ ತಾರೀಕಿಗೆ ಸರ್ವರ್ ಸಮಸ್ಯೆಯ ಸಬೂಬೂ ಎಂದಿನಂತೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಂದಿತ್ತು, ಜೊತೆಗೆ ಫಲಿತಾಂಶದ ಡಾಟಾಗಳನ್ನು ಅಪ್ಲೋಡ್ ಮಾಡುವಲ್ಲಿ ತಪ್ಪಾಗಿದೆ ಎಂದು ಸ್ವತಃ ವಿಶ್ವವಿದ್ಯಾಲಯ ತನ್ನ ತಪ್ಪನ್ನು ಒಪ್ಪಿಕೊಂಡಿತ್ತು. ಇದಾದ ನಂತರ ಮತ್ತೆ ಫಲಿತಾಂಶವನ್ನು ಮುಂದೂಡಿತ್ತು.
ಇದೀಗ ಹಲವು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಆದರೆ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದರೂ ಕೆಲವು ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ಕೂಡ ಬಂದಿಲ್ಲ, ಕೆಲವು ವಿದ್ಯಾರ್ಥಿಗಳ ಐದನೇ ಸೆಮಿಸ್ಟರ್ ಹಾಗೂ ಇನ್ನು ಕೆಲವು ವಿದ್ಯಾರ್ಥಿಗಳ ಆರನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿಲ್ಲ ಹೀಗಾಗಿ ವಿದ್ಯಾರ್ಥಿಗಳು ತಮ್ಮ ಮುಂದಿನ ಉನ್ನತ ಶಿಕ್ಷಣಕ್ಕೆ ತೆರಳಲು ಪರಿತಪಿಸುವಂತಾಗಿದೆ.
ಕೆಲವು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಂಕಿಗಳನ್ನೇ ನಮೂದಿಸದೆ, ಫೇಲ್ ಎಂದು ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ಫಸ್ಟ್ ಜೊತೆ ಮಾತನಾಡಿದ ಪದವಿ ವಿದ್ಯಾರ್ಥಿ ಹೇಳಿದ್ದು ಹೀಗೆ..
"ಈಗಾಗಲೇ ಸ್ನಾತ್ತಕೋತ್ತರ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.. ಎಲ್ಲಾ ಕಾಲೇಜಿನಲ್ಲೂ ಸರ್ಕಾರಿ ಸೀಟ್‌ಗಳೂ ಕೂಡ ಭರ್ತಿಯಾಗುತ್ತಿದೆ... ಸ್ನಾತ್ತಕೋತ್ತರ ತರಗತಿಯ ಪ್ರವೇಶಾತಿಗೆ ಪದವಿ ಫಲಿತಾಂಶ ಪ್ರಕಟವಾಗಿದ್ದರೆ ಮಾತ್ರ ಪ್ರವೇಶಾತಿ ಎಂದು ಕಾಲೇಜುಗಳು ಹೇಳುತ್ತಿವೆ.. ಹೀಗಾಗಿ ಆದಷ್ಟು ಬೇಗ ವಿವಿ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ವಿದ್ಯಾರ್ಥಿ ಆಗ್ರಹಿಸಿದ್ದಾರೆ.
ಮಂಗಳೂರು ವಿವಿಯ ಅವಾಂತರಗಳು ಕೇವಲ ಇಷ್ಟಕ್ಕೇ ಮುಗಿದಿಲ್ಲ .. ಈಗಾಗಲೇ ಪ್ರಕಟಿಸಿದ ಫಲಿತಾಂಶದಲ್ಲೂ ಸಾಲು ಸಾಲು ಯಡವಟ್ಟುಗಳನ್ನು ಮಾಡಿಕೊಂಡಿದೆ. ಉತ್ತಮ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಫೇಲ್ ಮಾಡಿದೆ. ಜೊತೆಗೆ ಮಾರ್ಕ್ಸ್ ಡಾಟಾ ಎಂಟ್ರಿ ಮಾಡುವಲ್ಲೂ ತಪ್ಪುಗಳು ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸದೇ ಹೋದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಮಂಗಳೂರು ವಿವಿ (ಮುಂದೂಡಿಕೆ ವಿವಿ) ಎಂಬ ಹಣೆಪಟ್ಟಿಯನ್ನು ಹೊತ್ತು ಕೊಳ್ಳುವ ಮುನ್ನ ಸರಿಯಾದ ರೀತಿಯಲ್ಲಿ ಫಲಿತಾಂಶವನ್ನು ಪ್ರಕಟಿಸಬೇಕಾದ ಜವಾಬ್ದಾರಿ ವಿವಿಯ ಮೇಲಿದೆ.
ವರದಿ:-ಉಡುಪಿ ಫಸ್ಟ್
They could have done supplimentary exam soon...they didn't have conducted 2 nd sem supplimentary exam still....many students are suffering from this..bcoz they couldn't get addmission in other colleges..
ಪ್ರತ್ಯುತ್ತರಅಳಿಸಿ