ಕರೋನ ಬಂದ ಸಮಯದಲ್ಲಿ ರಂಗದ ಮೇಲೆ ರಾಜನಂತೆ ಮೆರೆದವರೆಲ್ಲ ಇಂದು ಒಪ್ಪೊತ್ತಿನ ಊಟಕ್ಕೂ ಕಷ್ಟ ಪಡುವ ಸ್ಥಿತಿ ಬಂದಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡುವರೆ ಸಾವಿರಕ್ಕೂ ಅಧಿಕ ಯಕ್ಷಗಾನ ಕಲಾವಿದರು ಪ್ರದರ್ಶನಕ್ಕೆ ಅವಕಾಶವಿಲ್ಲದೆ ನಾನಾ ರೀತಿಯ ಕಷ್ಟ ಎದುರಿಸುತ್ತಿದ್ದರು.
ಜಿಲ್ಲೆಯಲ್ಲಿ ಇದೀಗ ಕರೋನ ಹದ್ದುಬಸ್ತಿಗೆ ಬಂದಿದ್ದು ಯಕ್ಷಗಾನ ರಂಗ ಮಂಟಪಕ್ಕೆ ಮರುಜೀವ ಬಂದಂತಾಗಿದೆ. ಸದ್ಯಾ ಎರಡು ಜಿಲ್ಲೆಯ 50 ಕ್ಕು ಅಧಿಕ ಯಕ್ಷಗಾನ ಮೇಳಗಳು ತಿರುಗಾಟದ ತಯಾರಿ ಆರಂಭಿಸಿದೆ.
ಕುಂದಾಪುರದ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳ ಈಗಾಗಲೇ ಪ್ರದರ್ಶನ ಯಾತ್ರೆ ಆರಂಭಿಸಿದೆ. ರಾತ್ರಿ ಪೂರ್ತಿ ಪ್ರದರ್ಶನ , ಕಾಲಮಿತಿಯ ಪ್ರದರ್ಶನಗಳಿಗೆ ವೇದಿಕೆ ಸಿದ್ಧವಾಗಿದೆ. ಹರಕೆ ಯಕ್ಷಗಾನ ಬಯಲಾಟಗಳಿಗೆ ದೇವಸ್ಥಾನ ಮಂಡಳಿ ಸಿದ್ಧವಾಗಿದೆ.
ದೇವರಿಗೆ ಹರಕೆ ಹೊತ್ತು ಬೆಳಕಿನ ಸೇವೆ ನೀಡಲು ಕಾಯುತಿದ್ದು ಭಕ್ತರಿಗು ಸಂತೋಷವಾಗಿದೆ. ಮೂಲತಃ ಕೆಲವು ಯಕ್ಷಗಾನ ಕಲಾವಿದರಿಗೆ ಬಣ್ಣ ಹಚ್ಚುವುದು ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ.
ಕಳೆದ ಎರಡು ವರ್ಷಗಳಿಂದ ಕರೋನ ಕಾರಣದಿಂದ ಯಕ್ಷವೇದಿಕೆ ಸ್ತಬ್ಧಗೊಂಡಿದ್ದವು. ಆ ಹಿನ್ನೆಲೆಯಲ್ಲಿ ಅನೇಕ ಕಲಾವಿದರು ಯಕ್ಷಗಾನ ಹೊರತುಪಡಿಸಿ ಅನ್ಯ ಉದ್ಯೋಗಗಳಲ್ಲಿ ಜೀವನ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಯಾರೊಬ್ಬರಿಗೂ ಉದ್ಯೋಗ ಕೈಹಿಡಿಯಲಿಲ್ಲ.
ಯಕ್ಷಗಾನ ರಂಗದ ಮೇಲೆ ದೇವಲೋಕವನ್ನೆ ಧರೆಗಿಳಿಸಬಲ್ಲವರಾಗಿದ್ದರು ಜೀವನೋಪಾಯಕ್ಕೆ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರಿ ಸ್ವಾಮ್ಯದಲ್ಲಿರುವ ಕೆಲವು ದೇವಸ್ಥಾನದ ಕಲಾವಿದರಿಗೆ ವೇತನ ದೊರಕಿತ್ತು. ಆದರೆ ಇತರ ಮೇಳದಲ್ಲಿ ದುಡಿಯುವ ಕಲಾವಿದರಿಗೆ ಯಾವುದೆ ಸಂಪಾದನೆ ಇರಲಿಲ್ಲ.
ಈ ಸಂದರ್ಭದಲ್ಲಿ ಕೋವಿಡ್ ಕಷ್ಟಕಾಲವನ್ನು ಮನಗಂಡು ಸರ್ಕಾರ ಕಲಾವಿದರಿಗೆ ಪರಿಹಾರ ಧನ ಒದಗಿಸಿತ್ತು. ಆದರೆ ಈ ಪರಿಹಾರಧನ ಕೆಲವು ಯಕ್ಷಗಾನ ಕಲಾವಿದರ ಕೈಗೆ ಇನ್ನು ಸೇರಿಲ್ಲ . ವಯಸ್ಸು 40 ದಾಟಿದ ಕಲಾವಿದರಿಗೆ ಮಾತ್ರ ಸರ್ಕಾರ ಅನುದಾನ ಪ್ರಕಟಿಸಿತ್ತು. ಆದರೆ ಬಾಲ್ಯದಲ್ಲೇ ಯಕ್ಷಗಾನ ಮೇಳಗಳನ್ನು ಸೇರಿರುವ ಅನೇಕ ಯುವ ಕಲಾವಿದರು ಸರ್ಕಾರದ ಅನುದಾನದಿಂದ ವಂಚಿತರಾದರು.
ಇನ್ನು ಮುಂದೆ ಯಾವುದೇ ಅಡೆತಡೆ ಇಲ್ಲದೆ ಯಕ್ಷಗಾನ ಎಲ್ಲೆಡೆ ನಿರಂತರ ಪ್ರದರ್ಶನ ನಡೆಯಬೇಕು ಎಂಬ ಇಂಗಿತ ಯಕ್ಷಗಾನ ಕಲಾವಿದರದ್ದಾಗಿದೆ. ಕೊನೆಗೂ ಯಕ್ಷಗಾನ ಕಲಾವಿದನ ಕಷ್ಟ ಬಗೆಹರಿಯುವ ಲಕ್ಷಣ ಕಂಡುಬರುತ್ತಿದೆ. ಯಕ್ಷಗಾನ ಕಲಾವಿದರು ರಂಗದಲ್ಲಿ ಕುಣಿಯಲು ತಯಾರಾಗಿದ್ದಾರೆ. ಕರಾವಳಿಯ ಬಹುತೇಕ ಯಕ್ಷಗಾನ ಪ್ರಿಯರು ಯಕ್ಷಗಾನಂ ಗೆಲ್ಗೆ ಎಂದು ಕಲಾವಿದರಿಗೆ ಪ್ರೋತ್ಸಾಹಿಸುತಿವುದರೊಂದಿಗೆ ಪ್ರದರ್ಶನ ನೋಡುವುದಕ್ಕೆ ಕಾಯುತ್ತಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ