ಗಂಗೊಳ್ಳಿ: ಜಿಲ್ಲೆಯಲ್ಲಿ ಗೋ ಹತ್ಯೆ ಮುಂತಾದ ಅಕ್ರಮಗಳಿಗೆ ಬ್ರೇಕ್: ಎಸ್ .ಟಿ. ವಿಷ್ಣುವರ್ಧನ್ ಹೇಳಿಕೆ
ಗಂಗೊಳ್ಳಿ : ರಾಜ್ಯದಲ್ಲಿ ಜಾರಿಯಾಗಿರುವ ಗೋಹತ್ಯೆ ನಿಷೇಧ ಕಾನೂನನ್ನು ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಗೋ ಕಳ್ಳತನ, ಗೋಹತ್ಯೆ ತಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ಸುಮಾರು 20 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ.
ಅಕ್ರಮ ಗೋ ಸಾಗಾಟ, ಗೋ ಕಳ್ಳತನ ತಡೆಯುವ ಪ್ರಕ್ರಿಯೆ ನಿರಂತವಾಗಿದ್ದು, ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು, ಈ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳನ್ನು ಬಂಧಿಸಲಾಗಿದೆ. ನೂರಾರು ಗೋವುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದರು.
ಗಂಗೊಳ್ಳಿ ಪೊಲೀಸ್ ಠಾಣೆ ವತಿಯಿಂದ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಗಂಗೊಳ್ಳಿಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಪಟ್ಟಂತೆ ಜರಗಿದ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಗಂಗೊಳ್ಳಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಸಾಕ್ಷಾಧಾರಗಳಿದ್ದು, ಅಮಾಯಕರಿಗೆ ತೊಂದರೆಯಾಗದಂತೆ ಕಾನೂನು ಕ್ರಮ ಜರುಗಿಸಲಾಗುವುದು
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು. ಸಮಾಜದಲ್ಲಿ ಶಾಂತಿ ಕದಡುವ, ಸಮಾಜ ಘಾತುಕ ಶಕ್ತಿಗಳನ್ನು ಬೆಂಬಲಿಸಬಾರದು. ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಾಗರಿಕರು ಇಲಾಖೆಯೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಿದೆ. ಕಾನೂನಿಗೆ ಗೌರವ ನೀಡಬೇಕು. ಯಾರೇ ಕಾನೂನಿಗೆ ವಿರುದ್ಧವಾಗಿ ಹೋದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕುಂದಾಪುರ ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಶ್ರೀಕಾಂತ ಮಾತನಾಡಿ, ಗಂಗೊಳ್ಳಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಪಟ್ಟಂತೆ ಈವರೆಗೆ 4 ಪ್ರಕರಣಗಳು ದಾಖಲಾಗಿವೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಎರಡೂ ಸಮುದಾಯದ ಮುಖಂಡರು ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ವ್ಯಕ್ತಿಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ಮುಂದಾಗಬಹುದಾದ ಅಹಿತಕರವಾದ ಘಟನೆಗಳನ್ನು ತಪ್ಪಿಸಲು ಸಹಕರಿಸಬೇಕು ಎಂದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ