"ಅರಿಶಿನ ಗಣಪತಿ ಅಭಿಯಾನ" ದಲ್ಲಿ ಭಾಗವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.
ಉಡುಪಿ, ಸೆಪ್ಟಂಬರ್ 4 (ಕ.ವಾ): ಈ ಬಾರಿಯ ಗೌರಿ ಗಣೇಶ ಹಬ್ಬ ಸನ್ನಿಹಿತವಾಗುತ್ತಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ವಿಷಯುಕ್ತ ರಾಸಾಯನಿಕ ಬಣ್ಣಗಳನ್ನು ಹೊಂದಿದ ಲಕ್ಷಾಂತರ ಗಣಪತಿ ವಿಗ್ರಹಗಳನ್ನು ನದಿ, ಕೆರೆ ಕಟ್ಟೆಗಳಲ್ಲಿ ವಿಸರ್ಜನೆಗೊಳಿಸುವುದರಿಂದ ನೀರಿನ ಮೂಲಗಳು ಮಾಲಿನ್ಯಗೊಳ್ಳುವುದರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆಯಂತೆ ಪಿಒಪಿ ಹಾಗೂ ಬಣ್ಣದ ಗಣಪತಿ ಮೂರ್ತಿಗಳನ್ನು ನಿರ್ಬಂಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹಾಗೂ ಕೋವಿಡ್-19 ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಬಾರಿಯ ಗೌರಿ ಗಣೇಶ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಅನಿವಾರ್ಯತೆಯಿದೆ, ವಿಷಯುಕ್ತ ರಾಸಾಯನಿಕ ಬಣ್ಣಗಳನ್ನು ಹೊಂದಿದ ಗಣಪತಿ ವಿಗ್ರಹಗಳನ್ನು ನದಿ ಕೆರೆಗಳಲ್ಲಿ ವಿಸರ್ಜಿಸಿದಲ್ಲಿ ನಮ್ಮ ಅಮೂಲ್ಯವಾದ ನೀರಿನ ಮೂಲಗಳನ್ನು ಹಾಳು ಮಾಡಿದಂತಾಗುತ್ತದೆ, ಇದರ ಬದಲು ಮನೆ ಮನೆಗಳಲ್ಲಿ ರೋಗನಿರೋಧಕ ಶಕ್ತಿಯುಳ್ಳ, ಅರಿಶಿನ ಮಿಶ್ರಿತವಾದ ಗೋಧಿ ಹಿಟ್ಟು ಅಥವಾ ರಾಗಿಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶನ ವಿಗ್ರಹಗಳನ್ನು ಮಾಡಿ ಪೂಜಿಸಬಹುದು, ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಬಳಸಿ ಪೂಜಿಸುವ ಬದಲು, ಹೂವು ಪತ್ರೆಗಳಿಂದ ಗಣಪತಿಯನ್ನು ಸಿಂಗರಿಸಬಹುದು, ಹಾಗೇ ಅರಿಶಿನ ಗಣೇಶನನ್ನು ಕೂರಿಸಲು ಪೀಠವಾಗಿ ತೆಂಗಿನ ಚಿಪ್ಪಿನ ಕರಟವನ್ನು ಉಪಯೋಗಿಸಬಹುದು, ಈ ರೀತಿ ಮಾಡಿದಲ್ಲಿ ನಮ್ಮ ನದಿ ತೊರೆಗಳು, ಕೆರೆ ಕಟ್ಟೆಗಳು ಮಾಲಿನ್ಯವಾಗುವುದನ್ನು ತಪ್ಪಿಸಬಹುದಲ್ಲವೇ? ಇದೂ ಅಲ್ಲದೇ ಕೋವಿಡ್ -19 ಗೆ ಅಗತ್ಯವಿರುವ ಸಾಮಾಜಿಕ ಅಂತರ ಕೂಡ ಕಾಪಾಡಿಕೊಂಡಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
ಈ ಕುರಿತು ಜನಾಂದೋಲನ ರೂಪಿಸುವ ಸದುದ್ದೇಶದಿಂದ ಈ ಬಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯಾದ್ಯಂತ “10 ಲಕ್ಷ ಅರಿಶಿನ ಗಣಪತಿ ಅಭಿಯಾನ” ಹಮ್ಮಿಕೊಂಡಿದ್ದು ಇದರನ್ವಯ, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಅರಿಶಿನ ಗಣಪತಿಯನ್ನು ತಯಾರಿಸಿ, ಪೂಜಿಸಿ, ಗಣಪತಿಯೊಂದಿಗಿನ ತಮ್ಮ ಸೆಲ್ಫಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್ ಸೈಟಿನಲ್ಲಿ ಅಪ್ ಲೋಡ್ ಮಾಡಬಹುದಾಗಿರುತ್ತದೆ, ಹಾಗೂ ಬಂಪರ್ ಬಹುಮಾನ ಗೆಲ್ಲಬಹುದಾಗಿರುತ್ತದೆ.
ಆದ್ದರಿಂದ, ಈ ಬಾರಿಯ ಗಣೇಶನನ್ನು ಪರಿಸರಸ್ನೇಹಿ ಹಾಗೂ ರೋಗನಿರೋಧಕ ಅರಿಶಿನ ಬಳಸಿ ತಯಾರಿಸುವಂತೆ ಹಾಗೂ ಪೂಜಿಸುವ ಮೂಲಕ ,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ನಾಗರೀಕರು ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಅಲ್ಲದೇ, ಸ್ವಯಂಸೇವಾ ಸಂಸ್ಥೆಗಳು, ಸ್ಥಳೀಯ ಸಕ್ರಿಯ ಸಂಘ ಸಂಸ್ಥೆಗಳು, ನಿವಾಸಿ ಸಂಘಗಳ ಪ್ರತಿನಿಧಿಗಳು ಈ ಬಾರಿ ವಿಶಿಷ್ಟ ರೀತಿಯಲ್ಲಿ ಗಣೇಶನನ್ನು ಪೂಜಿಸುವಲ್ಲಿ ಸಾರ್ವಜನಿಕರ ಮನ ಒಲಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕೋರಿರುವ ಜಿಲ್ಲಾಧಿಕಾರಿಗಳು, ಹೆಚ್ಚಿನ ಸಹಕಾರಕ್ಕಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಸಾರ್ವಜನಿಕರು ಸೆಪ್ಟಂಬರ್ 1 ರ ಬೆಳಿಗ್ಗೆ 6 ರಿಂದ ಆರಂಭಿಸಿ ಸೆಪ್ಟಂಬರ್ 10ರ ಸಂಜೆ 6 ವರೆಗೆ ತಾವು ತಯಾರಿಸಿದ ಅರಿಶಿನ ಗಣೇಶನ ಛಾಯಾ ಚಿತ್ರಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಲತಾಣ kspcb.karnataka.gov.in,
Youtube: @kspcbkarnataka,
Facebook: @kspcbofficial,
Twitter: @karnatakakspcb,
Instagram: kspcb_official ಗೆ ಕಳುಹಿಸಬಹುದಾಗಿದ್ದು, ಹೆಚ್ಚಿನ ವಿವರಗಳಿಗೆ ಮಂಡಳಿಯ ಜಾಲತಾಣ kspcb.karnataka.gov.in ವನ್ನು ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ