ಉಡುಪಿ :- ಕೃಷ್ಣಾಪುರ ಮಠ ಪರ್ಯಾಯೋತ್ಸವಕ್ಕೆ ತಯಾರಿ "ಕೋವಿಡ್ ನಿಯಮ ಪಾಲನೆ"
ಉಡುಪಿಯ ಸಾಂಸ್ಕೃತಿಕ ಹಬ್ಬವಾದ ಪರ್ಯಾಯೋತ್ಸವಕ್ಕೆ ದಿನಗಳು ಹತ್ತಿರವಾಗುತ್ತಿದೆ ಆದರೆ ಈ ಬಾರಿ ಕೋವಿಡ್ 19 ರ ಕಾರಣದಿಂದಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗಳ ಚತುರ್ಥ ಪರ್ಯಾಯ ಮಹೋತ್ಸವ ಸಮಿತಿಯ ಹಾಗೂ ಪರ್ಯಾಯ ಕಚೇರಿಯ ಉದ್ಘಾಟನಾ ಸಮಾರಂಭ ಭಾನುವಾರ ಕೃಷ್ಣಾಪುರ ಮಠದ ಕೃಷ್ಣಸಭಾ ಮಂದಿರದಲ್ಲಿ ನಡೆಯಿತು.ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪರ್ಯಾಯೋತ್ಸವ ಪೂರ್ವಭಾವಿಯಾಗಿ ನಡೆಯುವ ವಿಧಿ ವಿಧಾನಗಳು ಹಾಗೂ ಪರ್ಯಾಯ ಮಹೋತ್ಸವವನ್ನು ಕೋವಿಡ್ ನಿಯಮಾನುಸಾರ ನಡೆಸಲಾಗುವುದು.ನಾವು ಮಾಡುವ ಉತ್ತಮ ಕಾರ್ಯವು ದೇವರ ಚಿತ್ತಕ್ಕೆ ಬಂದು ದೇಶಕ್ಕೆ ಕಲ್ಯಾಣವಾಗಲಿ ಎಂದರು.
ಗುರುಗಳಾದ ಮಧ್ವಾಚಾರ್ಯರು, ಭಾವಿ ಸಮೀರರಾದ ವಾದಿರಾಜರ ಕೃಪೆ ಪರ್ಯಾಯದ ಮೇಲಿದ್ದು, ಪ್ರಪಂಚಕ್ಕೆ ಮಂಗಳವಾಗಲಿದೆ. ಕೃಷ್ಣಾಪುರ ಮಠದ ಅಭಿಮಾನದಿಂದ ಜವಾಬ್ದಾರಿ ವಹಿಸಿಕೊಂಡು ಪರ್ಯಾಯಯೋತ್ಸವ ಯಶಸ್ಸಿಗೆ ದುಡಿಯುತ್ತಿರುವ ಎಲ್ಲರಿಗೂ ಕೃಷ್ಣ ಮುಖ್ಯಪ್ರಾಣ ದೇವರು ಶ್ರೇಯಸ್ಸು ಉಂಟುಮಾಡಲಿ ಎಂದರು.
ಸಮಿತಿಯ ಕಾರ್ಯಾಧ್ಯಕ್ಷರಾದ ಉಡುಪಿ ಶಾಸಕ ರಘುಪತಿ ಭಟ್ ಸ್ವಾಮೀಜಿ ಮಾತನಾಡಿ, ಕೋವಿಡ್ ನಿಯಮಾನುಸಾರ ಪರ್ಯಾಯೋತ್ಸವದ ರೂಪುರೇಷೆಯನ್ನು ತಯಾರಿಸಿ ಉಡುಪಿ ನಗರದ ಅಭಿವೃದ್ಧಿಗೆ ಸರ್ಕಾರದಿಂದ ಗರಿಷ್ಠ ಅನುದಾನ ಪಡೆಯಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೆರವಣಿಗೆಗೆ ವಿಶೇಷ ಜಾನಪದ ಕಲಾ ತಂಡಗಳು ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗುವುದು. ಸರ್ಕಾರದಿಂದ ಪರ್ಯಾಯ ಮಹೋತ್ಸವಕ್ಕೆ ಸಹಕಾರ ನೀಡಲಾಗುವುದು ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್ ಮಾತನಾಡಿ, ಕೃಷ್ಣಾಪುರ ಶ್ರೀಗಳ ಪರ್ಯಾಯ ಯಶಸ್ಸಿಗೆ ಅಗತ್ಯ ಸಹಕಾರ ನೀಡುತ್ತೇವೆ ಹಾಗೂ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಕಟೀಲು ಅರ್ಚಕ ವಾಸುದೇವ ಅಸ್ರಣ್ಣ, ಲಕ್ಷ್ಮೀನಾರಾಯಣ ಅಸ್ರಣ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ್, ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾದ್ಯಾಯ, ಅಷ್ಟಮಠದ ದಿವಾನರು ಭಕ್ತರು ಇದ್ದರು.
ಪರ್ಯಾಯ ಸಮಿತಿಯ ಅಧ್ಯಕ್ಷರಾದ ಸೂರ್ಯ ನಾರಾಯಣ ಉಪಾದ್ಯಾಯ ಸ್ವಾಗತಿಸಿದರು. ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು ಕಾರ್ಯಕಾರಿ ಸದಸ್ಯರ ವಿವರ ನೀಡಿದರು. ಸಮಿತಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿ.ಲಕ್ಷ್ಮೀನಾರಾಯಣ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಸಂಯೋಜಕರಾಗಿ ಯು.ಕೆ.ರಾಘವೇಂದ್ರ ರಾವ್ ಧನ್ಯವಾದ ಸಮರ್ಪಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ