ಉಡುಪಿ ಕಸ ಎಸೆದರೆ ವಾಟ್ಸಾಪ್ ಮಾಡಿ "ನಮ್ಮ ಊರು ಸ್ವಚ್ಚ ಊರು"
'ನಮ್ಮ ಊರು, ಸ್ವಚ್ಛ ಊರು' ಎಂಬ ಪರಿಕಲ್ಪನೆಯಡಿ ಉಡುಪಿ ಜಿಲ್ಲೆಯನ್ನು 'ಬ್ಲಾಕ್ ಸ್ಪಾಟ್ ಫ್ರೀ' ಮಾಡಲು ಜಿಲ್ಲಾ ಪಂಚಾಯಿತಿ ಕಾರ್ಯತಂತ್ರ ರೂಪಿಸಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅ.2, ಗಾಂಧಿ ಜಯಂತಿಗೂ ಮುನ್ನ ಜಿಲ್ಲೆಯಲ್ಲಿ ಬಹಿರಂಗವಾಗಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು ಎಂಬುದು ಕಾರ್ಯಕ್ರಮದ ಆಶಯ.ನಮ್ಮ ಜಿಲ್ಲೆಯನ್ನು ಸ್ವಚ್ಛವಾಗಿ ಇಡುವುದು ನಮ್ಮೆಲ್ಲರ ಜವಾಬ್ದಾರಿ ಆದ್ದರಿಂದ ನಾವೆಲ್ಲರೂ ಇದಕ್ಕೆ ಕೈ ಜೋಡಿಸ ಬೇಕು.ಸಾರ್ವಜನಿಕರು ತಮ್ಮ ಮನೆಗಳನ್ನು ಮಾತ್ರ ಸ್ವಚ್ಛವಾಗಿಟ್ಟುಕೊಂಡರೆ ಸಾಲದು, ವಾಸ ಮಾಡುವ ಪ್ರದೇಶವನ್ನೂ ಸ್ವಚ್ಛವಾಗಿರಿಸಿಕೊಳ್ಳಲು ಸ್ಥಳೀಯ ಆಡಳಿತದೊಂದಿಗೆ ಕೈಜೋಡಿಸಬೇಕು. ಇದಕ್ಕಾಗಿ ನಾಗರಿಕರು ಮಾಡಬೇಕಾಗಿರುವುದು ಇಷ್ಟೆ. ಸಾರ್ವಜನಿಕ ಸ್ಥಳಗಳು ಅಂದರೆ ರಸ್ತೆ, ಬಸ್ ನಿಲ್ದಾಣ, ನದಿಯ ತೀರ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದರೆ ಅಂತಹ ಜಾಗಗಳ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು.
ಸಾರ್ವಜನಿಕರು 9483330564 ನಂಬರ್‌ಗೆ ಬ್ಲಾಕ್ ಸ್ಪಾಟ್ ಪ್ರದೇಶಗಳ ಮಾಹಿತಿಯನ್ನು ವಾಟ್ಸ್ ಆಯಪ್ ಮಾಡಬೇಕು. ದೂರು ನೀಡುವಾಗ ನಿರ್ಧಿಷ್ಟವಾದ ಪ್ರದೇಶ, ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ಎಂಬ ವಿವರ ಇರಲಿ. ಕಸ ಹಾಕುವವರ ಮಾಹಿತಿ ಹಾಗೂ ಅವರ ವಾಹನಗಳ ನಂಬರ್ ವಿವರವನ್ನೂ ವಾಟ್ಸ್ ಆಯಪ್ ಮಾಡಬಹುದು. ಮಾಹಿತಿ ನೀಡಿದವರ ಮೊಬೈಲ್ ನಂಬರ್ ಹಾಗೂ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್.
ಸಾರ್ವಜನಿಕರು ವಾಟ್ಸ್‌ಆಯಪ್‌ಗೆ ಕಳುಹಿಸಿದ ಮಾಹಿತಿ ಆಧಾರದ ಮೇಲೆ ಕಸ ಎಸೆದವರಿಗೆ ದಂಡ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು. ಜತೆಗೆ, ತ್ಯಾಜ್ಯ ಸಂಗ್ರಹವಾಗುವ ಬ್ಲಾಕ್ ಸ್ಪಾಟ್‌ಗಳಿಗೆ ಸ್ವಚ್ಛತಾ ಸಿಬ್ಬಂದಿ ಭೇಟಿನೀಡಿ ಸ್ವಚ್ಛಗೊಳಿಸಲಿದ್ದಾರೆ. ಮತ್ತೆ ಅಲ್ಲಿ ಕಸ ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಲಿದ್ದಾರೆ.
ತ್ಯಾಜ್ಯ ಸುರಿಯುವ ಜಾಗದಲ್ಲಿ ಅಗತ್ಯವಿದ್ದರೆ ಸಾರ್ವಜನಿಕರಿಗೆ ಕೂರಲು ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ಅಥವಾ ಪರಿಸರ ಜಾಗೃತಿ ಮೂಡಿಸುವ ಫಲಕಗಳನ್ನು ಪ್ರದರ್ಶಿಸಲಾಗುತ್ತದೆ. ಈ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತದೆ ಎಂದರು ಸಿಇಒ ಡಾ.ನವೀನ್ ಭಟ್.
ಸರ್ಕಾರದ ಯಾವುದೇ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನವಾಗಬೇಕಾದರೆ ಸಾರ್ವಜನಿಕರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ 'ನಮ್ಮ ಊರು ಸ್ವಚ್ಛ ಊರು' ಕಾರ್ಯಕ್ರಮದ ಯಶಸ್ಸಿಗೆ ಜನರ ಸಹಕಾರ ಅಗತ್ಯವಿದ್ದು, ಉಡುಪಿ ರಾಜ್ಯ ಹಾಗೂ ದೇಶದಲ್ಲೇ ಅತ್ಯಂತ ಸ್ವಚ್ಛ ನಗರವಾಗಿಸಲು ಕೈಜೋಡಿಸಬೇಕು ಎಂದರು.
ಒಣ ಹಾಗೂ ಹಸಿ ಕಸವನನ್ನು ಬೇರ್ಪಡಿಸಿ ಕಸ ವಿಲೇವಾರಿ ವಾಹನಗಳಿಗೆ ಕೊಡಬೇಕು. ಕಸ ಸಂಗ್ರಹ ವಾಹನ ಬರುತ್ತಿಲ್ಲವಾದರೆ ಸ್ಥಳೀಯ ಆಡಳಿತ ಅಥವಾ ಪಂಚಾಯಿತಿಗಳಿಗೆ ಕರೆ ಮಾಡಿ ವಿಚಾರಿಸಬೇಕು. ಯಾವುದೇ ಕಾರಣಕ್ಕೂ ರಸ್ತೆ ಬದಿಗೆ ಕಸ ತಂದು ಸುರಿಯಬಾರದು ಎಂದು ಮನವಿ ಮಾಡುತ್ತಾರೆ ಅವರು.
ಜಿಲ್ಲೆಯ 155 ಗ್ರಾಮ ಪಂಚಾಯಿತಿಗಳ ಪೈಕಿ 140ಕ್ಕಿಂತ ಹೆಚ್ಚು ಪಂಚಾಯಿತಿಗಳಲ್ಲಿ ಕಸ ಸಂಗ್ರಹ ನಡೆಯುತ್ತಿದ್ದರೂ ರಸ್ತೆಗಳ ಬದಿ, ಬಸ್ ನಿಲ್ದಾಣ, ನಿರ್ಜನ ಪ್ರದೇಶಗಳಲ್ಲಿ ಸಾರ್ವಜನಿಕರು ಕಸ ತಂದು ಸುರಿಯುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು 'ನಮ್ಮ ಊರು, ಸ್ವಚ್ಛ ಊರು' ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಜನರ ಸಹಕಾರ ಬೇಕಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ