ಉಡುಪಿ ಸೆಪ್ಟೆಂಬರ್ 30: ಅಕ್ರಮ ಕಸಾಯಿಖಾನೆ, ಗೋಹತ್ಯೆಯನ್ನು ಬುಡಸಮೇತ ನಿರ್ಮೂಲನೆಯ ಕುರಿತು ಹಾಗೂ ಗಂಗೊಳ್ಳಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಪ್ರಾರ್ಥನಾ ಮಂದಿರಗಳನ್ನು ಧ್ವಂಸಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಅಕ್ಟೋಬರ್ 1 ರಂದು ಸ್ವಯಂಪ್ರೇರಿತವಾಗಿ ಗಂಗೊಳ್ಳಿಯಲ್ಲಿ ಬಂದ್ ಗೆ ಕರೆ ನೀಡಿದೆ.
ಉಡುಪಿ ಜಿಲ್ಲೆಯ ಕೋಮು ಸೂಕ್ಷ್ಮ ಪ್ರದೇಶವಾದ ಗಂಗೊಳ್ಳಿಯಲ್ಲಿ ಮತ್ತೆ ಶಾಂತಿ ಕದಡಲು ದುಷ್ಕರ್ಮಿಗಳು ಪ್ರಯತ್ನಿಸುತ್ತಿದ್ದು, ಇತ್ತೀಚೆಗೆ ಬಹಿರಂಗವಾಗಿ ಗೋವಿನ ಹತ್ಯೆ ಮಾಡಿ ಅದನ್ನು ವಿಡಿಯೋ ಸಮೇತ ದುಷ್ಕರ್ಮಿಗಳು ವೈರಲ್ ಮಾಡಿದ್ದರು, ಇದೇ ವಿಚಾರದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು, ಆದರೆ ಬಂಧಿತ ಆರೋಪಿಗಳು ಮೂರೇ ದಿನದಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.
ಈ ನಡುವೆ ಆರೋಪಿಗಳಿಗೆ ಜಾಮೀನು ದೊರೆತಿದ್ದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೆ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ. ಅಲ್ಲದೆ ಮತ್ತೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಹಿಂದೂ ಸಂಘಟನೆಗಳು ನಾಳೆ ಅಕ್ಟೋಬರ್ 1 ರಂದು ಗಂಗೊಳ್ಳಿ ಬಂದ್ ಗೆ ಕರೆ ನೀಡಿದ್ದಾರೆ.
ಇ ನಿಮಿತ್ತ ನಾಳೆ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ರಸ್ತೆಗೆ ಇಳಿದು ಈ ದುಷ್ಕೃತ್ಯ ದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಸದ್ಯ ಕಿಡಿಗೇಡಿಗಳ ಕೃತ್ಯದಿಂದಾಗಿ ಗಂಗೊಳ್ಳಿ ಪರಿಸರ ಬೂದಿ ಮುಚ್ಚಿದ ಕೆಂಡದಂತಿದ್ದು, ಗಂಗೊಳ್ಳಿಯ ಪರಿಸ್ಥಿತಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ