ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, `ಮಾಸ್ಕ್ ಮ್ಯಾನ್' ಎಂದೇ ಗುರುತಿಸಿಕೊಂಡಿದ್ದ ಚಿನ್ನಯ್ಯನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆಗಾಗಿ ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (SIT) ಕಚೇರಿಯಿಂದ ತಾಲ್ಲೂಕು ಆಸ್ಪತ್ರೆಗೆ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕರೆದೊಯ್ದು, ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಸುಮಾರು 19 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆತ ಹಲವು ಪ್ರಮುಖ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಚಿನ್ನಯ್ಯ ಹೆಸರಿಸಿರುವ ವ್ಯಕ್ತಿಗಳನ್ನು ವಿಚಾರಣೆಗಾಗಿ ಕರೆಸುವ ಸಾಧ್ಯತೆ ಇದೆ.
ಆರೋಪಿ ಚಿನ್ನಯ್ಯ, ತಾನು 2014ರ ನಂತರ ತಮಿಳುನಾಡಿನಲ್ಲಿದ್ದೆ ಮತ್ತು 2023ರಲ್ಲಿ ಮೂವರ ಗುಂಪೊಂದು ತನ್ನನ್ನು ಇಲ್ಲಿಗೆ ಕರೆತಂದು ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಿತ್ತು ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ. ಈ ಮೊದಲು, ತಾನು ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿ ಸಂಚಲನ ಮೂಡಿಸಿದ್ದ. ಆದರೆ ಈಗ ತನ್ನ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದಾನೆ. ಆದರೂ, ಆತ ಕಳೆದೊಂದು ತಿಂಗಳಿನಿಂದ ಉತ್ಖನನ ಕಾರ್ಯಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಲ್ಲಿ ಓಡಾಡಿದ್ದ. ಸದ್ಯ, ಆತನ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ
ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ, ವೈದ್ಯಕೀಯ ಪ್ರಮಾಣಪತ್ರ ಪಡೆದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಎಸ್ಐಟಿ ಚಿನ್ನಯ್ಯನನ್ನು ತಮ್ಮ ವಶಕ್ಕೆ ಕೇಳುವ ಸಾಧ್ಯತೆ ಹೆಚ್ಚಿದೆ.
ಧರ್ಮಸ್ಥಳಕ್ಕೆ ನರಮಂಡಲ ತರಲು ಹೇಳಿದ ಮೂವರ ಹೆಸರನ್ನು `ಮಾಸ್ಕ್ ಮ್ಯಾನ್' ಚಿನ್ನಯ್ಯ ಬಹಿರಂಗಪಡಿಸಿದ್ದು, ಪೊಲೀಸರು ಮತ್ತು ಎಸ್ಐಟಿ ತಂಡ ಈ ಕುರಿತು ಆಳವಾದ ತನಿಖೆ ನಡೆಸಲಿದೆ. ನೂರಾರು ಶವಗಳಲ್ಲಿ ಶೇಕಡಾ 90ರಷ್ಟು ಮಹಿಳೆಯರು, ಯುವತಿಯರು ಮತ್ತು ಬಾಲಕಿಯರ ಶವಗಳಿದ್ದವು, ಮತ್ತು 15 ವರ್ಷದ ಬಾಲಕಿಯೊಬ್ಬಳ ದೇಹದಲ್ಲಿ ಲೈಂಗಿಕ ದೌರ್ಜನ್ಯದ ಗಾಯಗಳಿದ್ದವು ಎಂದು ಈ ಹಿಂದೆ ಚಿನ್ನಯ್ಯ ಹೇಳಿಕೆ ನೀಡಿದ್ದ. ಈಗ ಆತನ ಬಂಧನವು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.