ಇದು ಕಲ್ಲು ಹೃದಯವನ್ನೂ ನೀರಾಗಿಸುವ ಪುಟಾಣಿ ಮಗುವಿನ ಕರುಣಾಜನಕ ಕಥೆ.. ಇಲ್ಲಿ ಈ ಮಗು ಅದೇನು ತಪ್ಪು ಮಾಡಿತ್ತೋ ಆ ದೇವರೇ ಬಲ್ಲ.. ಆದರೆ ಇನ್ನೂ ಕೂಡ ಈ ಜಗತ್ತು ಅಂದ್ರೆ ಏನು ಅಂತ ತಿಳಿಯದ ಆ ಮಗುವನ್ನು ಆ ದೇವರು ಅದಾಗಲೇ ಪರೀಕ್ಷೆಗೆ ಒಳಪಡಿಸಿದ್ದಾನೆ. ಸದಾ ಸುಳ್ಳನೇ ಹೇಳಿ, ಮೋಸ ಮಾಡುತ್ತಾ ನಮ್ಮ ನಿಮ್ಮ ನಡುವೆ ಹಾಯಾಗಿ ಜೀವನ ನಡೆಸುವವರು ಒಂದೆಡೆ ಆದರೆ ಇನ್ನು ಈ ಜಗತ್ತನ್ನೇ ಅರಿಯದ ಈ ಮಗು ಪಡುವ ಕಷ್ಟ ನೋಡಿದ್ರೆ ನಿಜಕ್ಕೂ ದೇವರು ಇದ್ದಾನಾ ಎಂಬ ಪ್ರಶ್ನೆ ಮೂಡದೇ ಇರದು. ಎಲ್ಲಾ ಮಕ್ಕಳಂತೆ ಅಮ್ಮನ ಮಡಿಲಲ್ಲಿ ಎದೆಹಾಲು ಕುಡಿದು, ಆಟವಾಡಬೇಕಿದ್ದ ಮಗು ಈಗ ಆಸ್ಪತ್ರೆಯ ಹಾಸಿಗೆಯ ಮೇಲೆ ಸಾವು ಬದುಕಿನ ಹೋರಾಟದಲ್ಲಿ ನಿಮ್ಮ ನೆರವಿನ ನಿರೀಕ್ಷೆಯಲ್ಲಿದೆ.
ಕುಂದಾಪುರದ ಯರುಕೋಣೆ ಜನತಾ ಕಾಲೋನಿ ನಿವಾಸಿಯಾಗಿರುವ ರವೀಂದ್ರ ಪೂಜಾರಿ ದಂಪತಿಗಳ 6 ವರ್ಷದ ಮಗು ವಂಶಿತ್ ಪೂಜಾರಿ ಕಳೆದ ಕೆಲವು ವರ್ಷಗಳಿಂದ ಬ್ಲಡ್ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ವಂಶಿತ್ ಪೂಜಾರಿಗೆ 2 ವರ್ಷವಾಗಿದ್ದಾಗಲೇ ಬ್ಲಡ್ ಕ್ಯಾನ್ಸರ್ ಇರುವುದು ದೃಢವಾಗುತ್ತೆ. ಈ ಸಮಯದಲ್ಲಿ ತಂದೆ ತನ್ನಲ್ಲಿದ್ದ ಅಲ್ಪ ಸ್ವಲ್ಪ ಹಣದಿಂದ ಸಾಲ ಮಾಡಿ ಮತ್ತು ಸಹೃದಯಿ ದಾನಿಗಳ ನೆರವಿನಿಂದ ಮಗುವಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಾರೆ. ಮಗುವೂ ಕೂಡ ಸಂಪೂರ್ಣ ಚೇತರಿಕೆಯಾಗುತ್ತದೆ.
ಇದೀಗ ಮಗುವಿಗೆ ಮತ್ತೆ ಬ್ಲಡ್ ಕ್ಯಾನ್ಸರ್ ಉಲ್ಬಣಗೊಂಡಿದೆ. ಇದು ರವೀಂದ್ರ ಪೂಜಾರಿ ದಂಪತಿಗಳಿಗೆ ಬರಸಿಡಿಲು ಬಡಿದಂತಾಗಿದೆ.
ರವೀಂದ್ರ ಪೂಜಾರಿ ಅವರು ಕೂಲಿ ಕೆಲಸ ಕಾರ್ಮಿಕರು, ಕೊರೋನಾ ಲಾಕ್‌ಡೌನ್ ಆದ ಬಳಿಕ ಕೂಲಿ ಕೆಲಸವೂ ಇಲ್ಲದೇ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಮಗುವಿನ ಅನಾರೋಗ್ಯ ಅವರನ್ನು ಇನ್ನಷ್ಟು ದುರ್ಬಲರನ್ನಾಗಿ ಮಾಡಿದೆ. ಮಗುವಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಯ ವೈದ್ಯರು ಒಟ್ಟು ಹತ್ತು ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಹೇಳಿದ್ದಾರೆ.
ಇವರದು ತೀರ ಮಧ್ಯಮ ವರ್ಗದ ಕುಟುಂಬ. ಕೂಲಿ ಕೆಲಸ ಮಾಡಿ ಬಂದ ಹಣದಿಂದ ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದವರು ಮಗುವಿನ ತಂದೆ ರವೀಂದ್ರ ಪೂಜಾರಿ. ಈಗ ಅವರಿಗೆ ಹತ್ತು ಲಕ್ಷ ಮೊತ್ತವನ್ನು ಭರಿಸಲು ರವೀಂದ್ರ ಅವರಿಗೆ ಅಸಾಧ್ಯವಾಗಿದೆ. ಜೊತೆಗೆ ಒಬ್ಬಳು ಮಗಳೂ ಇದ್ದಾಳೆ ಅವಳ ವಿದ್ಯಾಭ್ಯಾಸದ ಖರ್ಚು ಕೂಡ ಇವರಿಗೆ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿ.
ಮಗು ವಂಶಿತ್ ಈಗ ಮಣಿಪಾಲದ pediatric hematology and oncology ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆಗೆ ಒಟ್ಟು ಹತ್ತು ಲಕ್ಷ ರುಪಾಯಿ ಖರ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಕುಟುಂಬ ಅನ್ಯ ಮಾರ್ಗವಿಲ್ಲದೆ ಸಹೃದಯಿ ದಾನಿಗಳ ನೆರವಿನ ಆಶಾಭಾವನೆಯಲ್ಲಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ